ಸರ್ಕಾರ ಪ್ರಶಸ್ತಿಗಳಿಗೆ ಅರ್ಜಿ ಕರೆಯುವುದು ಸರಿಯಲ್ಲ : ಸಾಹಿತಿ ಬನ್ನೂರು ರಾಜು

ಸಂಜೆವಾಣಿ ವಾರ್ತೆ
ಮೈಸೂರು ನ 06:ಸಾಹಿತ್ಯವೆಂಬುದು ಎಲ್ಲರಿಗೂ ಹಿತವಾದದ್ದಾಗಿದ್ದು, ಇಂತಹ ಹಿತವನ್ನು ಅಹಿತಗೊಳಿಸದೆ ಸಮಾಜಕ್ಕೆ ಉಣಬಡಿಸುವವನೇ ನಿಜವಾದ ಜನೋಪಯೋಗಿ ಸಾಹಿತಿ ಎಂದು ಪತ್ರಕರ್ತರೂ ಆದ ಸಾಹಿತಿ ಬನ್ನೂರು ಕೆ.ರಾಜು ಅಭಿಪ್ರಾಯಪಟ್ಟರು.
ನಗರದ ನಂಜುಮಳಿಗೆ ವೃತ್ತದ ಬಳಿಯಿರುವ ಗೋಪಾಲಸ್ವಾಮಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಸಾಹಿತಿ ಡಿ.ಎನ್.ಕೃಷ್ಣಮೂರ್ತಿ ಅವರ ಅರವತ್ತನೇ ವರ್ಷದ ಹುಟ್ಟು ಹಬ್ಬದ ದ್ಯೋತಕವಾಗಿ ನಡೆದ ಮಹಾನದಿ ಮತ್ತು ನ್ಯಾಯ ದರ್ಶನ, ಹಾಗೂ ಪರಿಕ್ರಮಣ ಎಂಬ ಮೂರು ಕಾದಂಬರಿಗಳ ಲೋಕಾರ್ಪಣೆ ಸಮಾರಂಭದಲ್ಲಿ ನ್ಯಾಯ ದರ್ಶನ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಓರ್ವ ಪ್ರಾಮಾಣಿಕ ವೈದ್ಯನ ಸುತ್ತ ಹೆಣೆದು ಕೊಂಡಿರುವ ನ್ಯಾಯ ದರ್ಶನ ಕಾದಂಬರಿಯು ಭ್ರಷ್ಟ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದ್ದು ಭ್ರಷ್ಟರ ವಿರುದ್ಧ ನಿಷ್ಟರ ಹೋರಾಟದ ದರ್ಶನ ಇಲ್ಲಿದೆಯೆಂದರು.
ಅಪ್ಪಟ ಗ್ರಾಮೀಣ ನೆಲದ ಹಿನ್ನೆಲೆಯಲ್ಲಿ ಬಂದಿರುವ ಸಾಹಿತಿ ಕೃಷ್ಣಮೂರ್ತಿಯವರು ಸಾಹಿತ್ಯದ ಮೂಲಕ ಜನೋಪಯೋಗಿ ಕೈಂಕರ್ಯ ಮಾಡುತ್ತಾ ಮೂರ್ನಾಲ್ಕು ದಶಕಗಳಿಂದ ನಿರಂತರ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದು ಸಾಕಷ್ಟು ಅಮೂಲ್ಯ ಕೃತಿಗಳನ್ನು ಕನ್ನಡ ಸಾಹಿತ್ಯ ಭಂಡಾರಕ್ಕೆ ನೀಡಿದ್ದಾರೆ. ಇವರ ರಚನೆಯ ಪ್ರತಿಯೊಂದು ಸಾಹಿತ್ಯ ಪುಸ್ತಕ ಗಳೂ ಅಮೂಲ್ಯವೇ ಆಗಿದ್ದು ಇವುಗಳಲ್ಲಿ ಬಹುತೇಕ ಕೃತಿಗಳು ಸದ್ಭಾವವನ್ನೇ ತುಂಬಿ ಕೊಂಡಿರುವುದರಿಂದ ಕಲುಷಿತ ಸಮಾಜವನ್ನು ಶುದ್ಧೀಕರಿಸಲು ಈ ಪುಸ್ತಕಗಳನ್ನು ಸರ್ಕಾರ ವಿವಿಧ ಹಂತಗಳಲ್ಲಿ ಶಾಲಾ ಕಾಲೇಜುಗಳಿಗೆ ಪಠ್ಯವಾಗಿ ಅಳ ವಡಿಸುವ ಅಗತ್ಯವಿದೆ. ಇದರಿಂದ ಮುಂದಿನ ಪೀಳಿಗೆ ಸನ್ಮಾರ್ಗದಲ್ಲಿ ನಡೆದು ಸ್ವಚ್ಛ ಬದುಕನ್ನು ಕಟ್ಟಿಕೊಳ್ಳಲು ಅನುಕೂಲವಾಗುತ್ತದೆ. ಇಂಥ ಸಾಧಕರನ್ನು ಗುರುತಿಸಲು ಸಾಹಿತ್ಯವೇ ಅಲ್ಲದೆ ಯಾವುದೇ ಕ್ಷೇತ್ರವಾದರೂ ಸರಿಯೆ ಪ್ರಶಸ್ತಿಗಳನ್ನು ನೀಡಲು ಅರ್ಜಿಗಳನ್ನು ಆಹ್ವಾನಿಸುವ ಕ್ರಮ ಸರಿಯಲ್ಲ. ಸ್ವಾಭಿಮಾನ, ಮಾನ, ಮರ್ಯಾದೆ,ಗೌರವ ಇರುವ ಯಾವ ನೈಜ ಸಾಧಕರು ತಾನೆ ಅರ್ಜಿ ಸಲ್ಲಿಸಲು ಇಚ್ಛಿಸುತ್ತಾರೆ ? ಎಂದು ಪ್ರಶ್ನಿಸಿದ ಅವರು, ವಾಸ್ತವವಾಗಿ ಸರ್ಕಾರವೇ ಸಾಧಕರನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಇತರ ಪ್ರಶಸ್ತಿಗಳನ್ನು ಯೋಗ್ಯರಿಗೆ ನೀಡಬೇಕು. ಇದಕ್ಕಾಗಿ ರಾಜ್ಯದಿಂದ ಹಿಡಿದು ಜಿಲ್ಲಾದ್ಯಂತ ಇರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಕೆಲಸ ಮಾಡುವುದು ನಮ್ಮ ಸಂಸ್ಕೃತಿ. ಇದನ್ನು ಬಿಟ್ಟು ಅರ್ಜಿ ಕರೆಯುವುದು ಒಂದು ರೀತಿ ಸರ್ಕಾರ ಸಾಧಕರನ್ನು ಅಪಮಾನಿಸಿದಂತೆ ಎಂದು ವಿಷಾದದಿಂದ ಹೇಳಿದರು.
ಇದಕ್ಕೂ ಮುನ್ನ ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಕೋರಿ ಮಾತನಾಡಿದ ಮಾಜಿ ಸಚಿವ ಸಿ.ಹೆಚ್.ವಿಜಯ ಶಂಕರ್ ಅವರು,ಡಿಎನ್ಕೆ ಅವರು ನಮ್ಮ ಮೈಸೂರು ಭಾಗದ ಪ್ರಸಿದ್ಧ ಸಾಹಿತಿಗಳಲ್ಲೊಬ್ಬರು ನಮಗೆ ಹೆಮ್ಮೆ. ಅಷ್ಟೇ ಅಲ್ಲ ಬಹಳ ವರ್ಷಗಳಿಂದ ಆತ್ಮೀಯ ಸ್ನೇಹಿತರಾಗಿರುವುದೂ ಸಂತಸದ ವಿಷಯವೇ ಎಂದು ಹೇಳಿ ಅವರ ಸಾಹಿತ್ಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಾಹಿತಿ ಡಾ. ಸಿಪಿಕೆ ಅವರು ಮಹಾನದಿ ಕಾದಂಬರಿಯನ್ನೂ ಮತ್ತು ಸಾಹಿತಿ ಹಾಗು ವಿದ್ವಾಂಸ ಡಾ.ಎಸ್.ಶಿವರಾಜಪ್ಪನವರು ಪರಿಕ್ರಮಣ ಕಾದಂಬರಿಯನ್ನೂ ಬಿಡುಗಡೆ ಮಾಡಿ ನಂತರ ಆ ಕೃತಿಗಳನ್ನು ಕುರಿತು ಮಾತನಾಡಿದರು.
ಕೃಷ್ಣರಾಜ ವಿದಾನಸಭಾ ಕ್ಷೇತ್ರದ ಶಾಸಕರಾದ ಟಿ.ಎಸ್.ಶ್ರೀವತ್ಸ ಅವರು ತಮ್ಮ ಬದುಕಿನಲ್ಲಿ ಅರವತ್ತು ವಸಂತಗಳನ್ನು ಕಂಡ ಸಾಹಿತಿ ಡಿ.ಎನ್.ಕೃಷ್ಣಮೂರ್ತಿ ಅವರನ್ನು ದಂಪತಿ ಸಮೇತ ಫಲ ಪುಷ್ಪ ತಾಂಬೂಲದೊಡನೆ ಮೈಸೂರು ಪೇಟ ತೊಡಿಸಿ ಶಾಲು ಹೊದಿಸಿ ಗೌರವಿಸಿ ಅಭಿನಂದಿಸಿದರು. ಅರವತ್ತು ತುಂಬಿದ ತಮ್ಮನ್ನು ಅಭಿಮಾನ ಪೂರ್ವಕವಾಗಿ ಸನ್ಮಾನಿಸಿ ಅಭಿನಂದಿಸಿದ್ದಕ್ಕೆ ಕೃಷ್ಣಮೂರ್ತಿಯವರು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಮುಖ್ಯ ಅತಿಥಿಗಳಾಗಿ ಎಸ್.ಆರ್. ಗೋಪಾಲರಾವ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ನಂ.ಶ್ರೀಕಂಠ ಕುಮಾರ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯ ಶಂಕರ ನಾರಾಯಣ ಇನ್ನಿತರರು ಉಪಸ್ಥಿತರಿದ್ದರು. ಮಹಾರಾಜ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಡಾ. ಎಸ್. ಮುರಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕು. ನಿವೇದಿತಾ ಅವರ ಪ್ರಾರ್ಥನೆ ಯೊಡನೆ ಪ್ರಾರಂಭವಾದ ಸಮಾರಂಭದಲ್ಲಿ ಕವಿ ಶಿಶಿರಂಜನ್ ಸ್ವಾಗತಿಸಿದರೆ, ಶಿಕ್ಷಕ ಶಂಕರ್ ವಂದಿಸಿದರು. ಉಪನ್ಯಾಸಕ ರಾಜೇಂದ್ರ ಪ್ರಸಾದ್ ಹೊನ್ನಲಗೆರೆ ಅಚ್ಚು ಕಟ್ಟಾಗಿ ಕಾರ್ಯಕ್ರಮವನ್ನು ನಿರೂಪಿಸಿದರು.