ಸರ್ಕಾರ ಪ್ರತಿ ವರ್ಷ ರಾಷ್ಟ್ರಕೂಟ ಉತ್ಸವ ಆಚರಿಸಬೇಕು: ದಸ್ತಿ

ಕಲಬುರಗಿ:ಮಾ.06: ಪ್ರತಿ ವರ್ಷ ಸರ್ಕಾರವು ರಾಷ್ಟ್ರಕೂಟ ಉತ್ಸವ ಹಮ್ಮಿಕೊಳ್ಳಬೇಕು ಎಂದು ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಲಕ್ಷ್ಮಣ್ ದಸ್ತಿ ಅವರು ಒತ್ತಾಯಿಸಿದರು.
ನಗರದ ಎಸ್.ಎಂ. ಪಂಡಿತ್ ರಂಗ ಮಂದಿರದಲ್ಲಿ ಕಲ್ಯಾಣ ನಾಡು ವಿಕಾಸ್ ವೇದಿಕೆಯ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರಕೂಟ ಉತ್ಸವ ಸಮಾರಂಭ ಹಾಗೂ ಕಲ್ಯಾಣ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಂಪಿ ಉತ್ಸವ, ಬನವಾಸಿ ಉತ್ಸವ, ಲಕ್ಕುಂಡಿ ಉತ್ಸವ, ಚಾಲುಕ್ಯ ಉತ್ಸವ, ಮೈಸೂರು ದಸರಾ ಉತ್ಸವದಂತೆ ಕಲಬುರ್ಗಿಯಲ್ಲಿ ಪ್ರತಿ ವರ್ಷ ರಾಷ್ಟ್ರಕೂಟ ಉತ್ಸವ ಆಚರಿಸಬೇಕು ಎಂದರು.
ಕನ್ನಡಕ್ಕೆ ಮೊಟ್ಟ ಮೊದಲ ಘನತೆ ನೀಡಿದ ಹೆಗ್ಗಳಿಕೆ ಕಲ್ಯಾಣ ನಾಡುಗೆ ಸಲ್ಲುತ್ತದೆ ಈ ನೆಲದ ಸಂಸ್ಕøತಿಕ, ಸಾಮರಸ್ಯವನ್ನು ಜಗತ್ತಿಗೆ ಪರಿಚಯಿಸುವ ಕೆಲಸವಾಗಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರವೇ ಪ್ರತಿ ವರ್ಷ ರಾಷ್ಟ್ರಕೂಟ ಉತ್ಸವ ಮಾಡಬೇಕೆಂದು ಅವರು ಆಗ್ರಹಿಸಿದರು.
ಮುಖ್ಯ ಅತಿಥಿಗಳಾಗಿದ್ದ ಕರ್ನಾಟಕ ನವ ನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ಭೀಮಾಶಂಕರ್ ಪಾಟೀಲ್ ಅವರು ಮಾತನಾಡಿ, ಕಲ್ಯಾಣ ಕರ್ನಾಟಕದ ಕೇಂದ್ರ ಭಾಗವಾಗಿ ಕಲಬುರ್ಗಿಯಲ್ಲಿ ಈ ಭಾಗದ ಜನರಿಗೆ ಸಾಹಿತ್ಯ ಹಾಗೂ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದವರನ್ನು ಗುರುತಿಸಿ ಕಲ್ಯಾಣ ನಾಡು ವಿಕಾಸ ವೇದಿಕೆಯು ಸನ್ಮಾನಿಸಿದ್ದು ಜೊತೆಗೆ ರಾಜ್ಯ ಸರ್ಕಾರವು ಮಾಡಬೇಕಾಗಿರುವ ಉತ್ಸವವನ್ನು ಒಂದು ಸಂಘಟನೆಯಾಗಿ ಕಲ್ಯಾಣ ನಾಡು ವಿಕಾಸ್ ವೇದಿಕೆಯು ರಾಷ್ಟ್ರಕೂಟ ಉತ್ಸವವನ್ನು ಮಾಡಿದ್ದು ಹೆಮ್ಮೆಯ ವಿಷಯ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಪ್ರಗತಿ ಪರ ಚಿಂತಕ ಸುನೀಲ್ ಕುಲಕರ್ಣಿ ಅವರು ಮಾತನಾಡಿ, ರಾಷ್ಟ್ರಕೂಟರ ಸಾಮ್ರಾಜ್ಯವು ನರ್ಮದಾ ನದಿಯಿಂದ ಕಾವೇರಿ ನದಿಯವರೆಗೆ ಹಬ್ಬಿದ್ದು ಅಜಂತಾ-ಎಲ್ಲೋರಾ ಹಾಗೂ ಎಲಿಫೆಂಟಾ ಎಂಬ ಸ್ಥಳಗಳಲ್ಲಿ ನಿರ್ಮಿಸಿರುವ ಸ್ಮಾರಕಗಳು ಯುನೆಸ್ಕೋ ಪಟ್ಟಿಯಲ್ಲಿದ್ದು ಅವುಗಳನ್ನು ರಾಷ್ಟ್ರಕೂಟರು ನಿರ್ಮಿಸಿದ್ದಾರೆ ಎಂದರು.
ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಮುತ್ತಣ್ಣ ಎಸ್. ನಡಗೇರಿ ಅವರು ನೇತೃತ್ವವನ್ನು ವಹಿಸಿ ಮಾತನಾಡಿ, ಜಗತ್ತಿನ ನಾಲ್ಕು ಮಹಾನ ಸಾಮ್ರಾಜ್ಯಗಳಲ್ಲಿ ರಾಷ್ಟ್ರಕೂಟ ಸಾಮ್ರಾಜ್ಯವು ಒಂದು. ಭಾರತ ದೇಶದ ಅರ್ಧ ಭೂಭಾಗವನ್ನು ಆಳ್ವಿಕೆ ಮಾಡಿದ್ದ ಮಹಾನ ದೊರೆಗಳು ರಾಷ್ಟ್ರಕೂಟರಾಗಿದ್ದಾರೆ. ರಾಷ್ಟ್ರಕೂಟ ದೊರೆಗಳು ಸುಮಾರು 230 ವರ್ಷಗಳ ಕಾಲ ಆಳ್ವಿಕೆ ಮಾಡಿ ಸುಮಾರು 15 ದೊರೆಗಳು ಆಡಳಿತವನ್ನು ಮಾಡಿದ್ದಾರೆ .ಅದರಲ್ಲಿ ಸಾಮ್ರಾಟ್ ಅಮೋಘವರ್ಷ ನೃಪತ್ತುಂಗ ದೊರೆಗಳು 64 ವರ್ಷಗಳ ಕಾಲ ಆಳ್ವಿಕೆ ಮಾಡಿ ಸಾಹಿತ್ಯ, ಆಡಳಿತ, ಕಲೆ ವಾಸ್ತುಶಿಲ್ಪಾ, ಪ್ರಜೆಗಳ ಕ್ಷೇಮಾಭಿವೃದ್ಧಿಗಾಗಿ ಹಲವು ಕಾರ್ಯಗಳನ್ನು ಮಾಡಿದ್ದಾರೆ ಎಂದರು.
ಕನ್ನಡಕ್ಕೆ ಮೊಟ್ಟ ಮೊದಲ ಗ್ರಂಥ ಕವಿರಾಜ್ ಮಾರ್ಗ ನೀಡಿದ ಶ್ರೀ ವಿಜಯ ಹಾಗೂ ಭಾರತ ದೇಶಕ್ಕೆ ಹಿಂದು ಕಾನೂನು ಗ್ರಂಥ ನೀಡಿದ್ದ ವಿಜ್ಞಾನೇಶ್ವರರು ರಾಷ್ಟ್ರಕೂಟರ ಕಾಲಿನಲ್ಲಿದ್ದ ಸಾಹಿತಿಗಳಾಗಿದ್ದರು. ಪ್ರಜೆಗಳ ಕ್ಷೇಮಕ್ಕಾಗಿ ಭೀಕರ ಬರಗಾಲದ ಸಮಯದಲ್ಲಿ ರಾಜ್ಯದಲ್ಲಿ ತಲೆದೂರಿದ ಬರಗಾಲವನ್ನು ತೊಲಗಿಸುವ ಸಲ್ಲುವಾಗಿ ಕೊಲ್ಹಾಪೂರದ ಶ್ರೀ ಮಹಾಲಕ್ಷ್ಮೀ ದೇವಿಯಲ್ಲಿ ಪ್ರಾರ್ಥನೆ ಮಾಡಿ ತಮ್ಮ ಕಿರು ಬೆರಳನ್ನು ನೀಡಿ ಬರಗಾಲ ನಿಯಂತ್ರಣಕ್ಕಾಗಿ ಬೇಡಿಕೊಂಡಿದ್ದರು. ಇಂತಹ ಮಹಾನ ಸಾಮ್ರಾಜ್ಯ ಮತ್ತು ಸಾಮ್ರಾಟ್ ಅಮೋಘವರ್ಷ ನೃಪತುಂಗರ ಅಸ್ತಿತ್ವವು ಉಳಿಯಲು ಹಾಗೂ ಮುಂದಿನ ಪಿಳಿಗೆಯು ರಾಷ್ಟ್ರಕೂಟರ ಎಲ್ಲ ರೀತಿಯ ಆಡಳಿತವನ್ನು ನೆನಪಿನಲ್ಲಿಟ್ಟುಕೊಳ್ಳಲು ಹಾಗೂ ಬೇರೆ ಕಡೆಗಳಲ್ಲಿ ಆಚರಿಸುತ್ತಿರುವ ಉತ್ಸವಗಳಂತೆ ಕಲಬುರ್ಗಿಯಲ್ಲಿಯೂ ರಾಜ್ಯ ಸರ್ಕಾರವು ಪ್ರತಿವರ್ಷ ರಾಷ್ಟ್ರಕೂಟರ ಉತ್ಸವನ್ನು ಆಚರಿಸಬೇಕೆಂದು ಅವರು ಒತ್ತಾಯಿಸಿದರು.
ಇದೇ ವೇಳೆಯಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವೇದಿಕೆಯ ಮೇಲೆ ಮಾಜಿ ಸಚಿವ ರೇವುನಾಯಕ್ ಬೆಳಮಗಿ, ಮಾಜಿ ಶಾಸಕ ಅಲ್ಲಮ ಪ್ರಭು ಪಾಟೀಲ್, ಮಾಜಿ ಮಹಾಪೌರ ಶರಣು ಮೋದಿ, ಹಾಗೂ ವೇದಿಕೆಯ ಸಂಘಟಕರಾದ ಬಾಬು ಮದನಕರ್, ಉದಯಕುಮಾರ್ ಖಣಗೆ, ಸೂರ್ಯಪ್ರಕಾಶ್ ಚಾಳಿ, ಜೈಭೀಮ್ ಮಾಳಗೆ, ಅವಿನಾಶ್ ಕಪನೂರ್, ಮಹೇಶ್ ಮಾನೆ, ವಿಜಯಕುಮಾರ್ ಕಂಬಾರ್, ಪಂಡಿತ್ ಮದಗುಣಕ್ಕಿ, ಸಿದ್ದಲಿಂಗ್ ಉಪ್ಪಾರ್, ನಾಗು ಡೊಂಗರಗಾಂವ್, ರಾಕೇಶ್ ಕೋರವಾರ್, ದೇವು ದೊರೆ ಮುಂತಾದವರು ಉಪಸ್ಥಿತರಿದ್ದರು.