ಸರ್ಕಾರ ಪ್ರತಿ ಕುಟುಂಬಕ್ಕೆ ವಾರ್ಷಿಕ 72 ಸಾವಿರ ನೀಡುತ್ತಿದೆ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜ.31: ರಾಜ್ಯ ಸರ್ಕಾರ ತನ್ನ 05 ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಪ್ರತಿ ಕುಟುಂಬಕ್ಕೂ ವಾರ್ಷಿಕ 72 ಸಾವಿರಕ್ಕೂ ಅಧಿಕ ಹಣ ನೀಡುತ್ತಿದೆ. ವಾರ್ಷಿಕ 72 ಸಾವಿರ ರೂ ನೀಡುವ ಕಾಂಗ್ರೆಸ್ ಸರ್ಕಾರ ಬೇಕೋ ಅಥವಾ ಚುನಾವಣಾ ಸಂದರ್ಭದಲ್ಲಿ ಕೇವಲ ಎರಡು ಸಾವಿರ ರೂ ನೀಡಿ ಮತ ಆಮಿಷ ಒಡ್ಡುವವರು ಬೇಕೋ ಎನ್ನುವುದನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರರು ನಿರ್ಧರಿಸಬೇಕು ಎಂದು ತಾಲೂಕು ಕಾಂಗ್ರೆಸ್ ಮುಖಂಡ ಬಿ.ಎಲ್.ದೇವರಾಜು ಹೇಳಿದರು.
ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಿ ಮಟ್ಟದ ಎರಡನೇ ಸುತ್ತಿನ ಪೂರ್ವಬಾವಿ ಪ್ರಚಾರ ಸಭೆಗಳಲ್ಲಿ ಮಾನಾಡಿ ಜನ ಕಲ್ಯಣಕ್ಕಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ 05 ಗ್ಯಾರಂಟಿ ಯೋಜನೆಗಳ ಫಲವನ್ನು ಪಕ್ಷದ ಕಾರ್ಯಕರ್ತರು ಜನರ ಮನೆಮನೆಗೆ ತಿಳಿಸುವ ಕೆಲಸ ಮಾಡಬೇಕೆಂದರು. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ನನ್ನನ್ನು ಗುರುತಿಸಿ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿತ್ತು. ಆದರೆ ನಾನು ಪರಾಜಿತನಾದೆ. ಇದಕ್ಕೆ ಹಲವು ಕಾರಣಗಳಿವೆ. ಭಗವಂತ ಭೂಮಿಯ ಮೇಲಿದ್ದರೆ ನನ್ನ ಸೋಲಿಗೆ ಕಾರಣಕರ್ತರಾಗಿ ಪಕ್ಷ ದ್ರೋಹ ಮಾಡಿದವರನ್ನು ಶಿಕ್ಷಿಸಲಿ ಎಂದ ಬಿ.ಎಲ್.ಡಿ ಕ್ಷೇತ್ರದಲ್ಲಿ ಶಾಸಕರನ್ನು ಹೊರತುಪಡಿಸಿದರೆ ರಾಜಕಾರಣ ಮಾಡಲು ಇರುವ ಮತ್ತೊಂದು ಕ್ಷೇತ್ರವೆಂದರೆ ಹಾಲು ಉತ್ಪಾದಕರ ಸಹಕಾರ ಸಂಘಗಳು. ಮನ್ ಮುಲ್ ನಿರ್ದೇಶಕರಾಗುವವರು ಪ್ರತಿ ಮತ ಪಡೆಯಲು ಒಂದು ಒಂದೂವರೆ ಲಕ್ಷ ಹಣ ಕೊಡುತ್ತಿದ್ದಾರೆ. ಡೈರಿಗಳಲ್ಲಿ ರಾಜಕೀಯ ಹುಟ್ಟುಹಾಕಿ ಗ್ರಾಮಗಳನ್ನು ವಿಭಜಿಸುತ್ತಿದ್ದಾರೆ. ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಸಹಕಾರ ಸಂಘಗಳ ಮೇಲೆ ನಿಯಂತ್ರಣ ಸಾಧಿಸಬೇಕೆಂದರು.
ಬಹುತೇಕ ಕಡೆ ನಡೆದ ಸಭೆಗಳಲ್ಲಿ ಕಾರ್ಯಕರ್ತರು ಚುನಾವಣಾ ಸಂದರ್ಭದಲ್ಲಿ ಮಾತ್ರ ಹಳ್ಳಿಗಳಿಗೆ ಬರುತ್ತಿರುವ ಕಾಂಗ್ರೆಸ್ ಮುಖಂಡರ ನಡೆಯ ವಿರುದ್ದ ಆಕ್ರೋಶ ಹೊರ ಹಾಕಿದರು. ನಿಮ್ಮ ಮಾತು ಕೇಳಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂಸದೆ ಸುಮಲತಾ ಅವರ ಪರ ಕೆಲಸ ಮಾಡಿದ್ದೇವೆ. ಸ್ಥಳೀಯ ಸಂಸ್ಥೆ ಮತ್ತು ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ದಿನೇಶ್ ಗೂಳೀಗೌಡ ಮತ್ತು ಮಧು ಮಾದೇಗೌಡರ ಪರ ಪ್ರಚಾರ ನಡೆಸಿ ಗೆಲ್ಲಿಸಿದ್ದೇವೆ. ಕೆ.ಆರ್.ಪೇಟೆ ವಿಧಾನ ಸಭಾ ಕ್ಷೇತ್ರಕ್ಕೆ ಅವರ ಕೊಡುಗೆ ಏನು? ಚುನಾವಣೆಯಲ್ಲಿ ಗೆದ್ದ ಅನಂತರ ಅವರ?ಯಾರು ನಮ್ಮ ಕ್ಷೇತ್ರದತ್ತ ತಿರುಗಿ ನೋಡುತ್ತಿಲ್ಲ. ಅದೇ ಜೆಡಿಎಸ್ ನಾಯಕರಾದ ಹೆಚ್.ಡಿ.ದೇವೇಗೌಡರು, ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ ಮುಂತಾದವರು ತಮ್ಮದಲ್ಲದ ಕ್ಷೇತ್ರದ ಕಾರ್ಯಕರ್ತರ ಕಷ್ಠ ಸುಖಗಳಿಗೆ ಸ್ಪಂಧಿಸುತ್ತಾರೆ. ತಮ್ಮ ವ್ಯಾಪ್ತಿಗೆ ಬಾರದ ಕೆ.ಆರ್.ಪೇಟೆ ವಿಧಾನ ಸಭಾ ಕ್ಷೇತ್ರಕ್ಕೂ ತಮ್ಮ ಪಕ್ಷದ ರಾಜ್ಯ ಸಭಾ ಸದಸ್ಯರು ಮತ್ತು ವಿಧಾನ ಪರಿಷತ್ ಸದಸ್ಯರಿಂದ ಅನುದಾನ ಹಾಕಿಸಿಕೊಡುತ್ತಾರೆ. ಕಾಂಗ್ರೆಸ್ ಪಕ್ಷದ ಮುಖಂಡರ ಮನೋಭಾವದಲ್ಲಿ ಬದಲಾವಣೆಯಾಗಬೇಕು. ಪಕ್ಷದ ಮುಖಂಡರು ಪರಸ್ಪರ ಗುಂಪುಗಾರಿಕೆ ತ್ಯಜಿಸಿ ಸಮನ್ವಯ ಗುಣವನ್ನು ಬೆಳೆಸಿಕೊಳ್ಳಬೇಕು. ಕಾರ್ಯಕರ್ತರು ಪಕ್ಷದ ಒಬ್ಬ ನಾಯಕನ ಬಳಿ ಹೋದರೆ ಮತ್ತೊಬ್ಬ ನಾಯಕನಿಗೆ ಆಗುವುದಿಲ್ಲ. ಕಾರ್ಯಕರ್ತರು ಯಾವುದೇ ನಾಯಕನ ಜೊತೆ ವಿಶ್ವಾಸದಲ್ಲಿದ್ದರು ಅವನು ನಮ್ಮ ಪಕ್ಷದ ಕಾರ್ಯಕರ್ತ ಎನ್ನುವ ಮನೋಬಾವ ಸ್ಥಳೀಯ ಕಾಂಗ್ರೆಸ್ ನಾಯಕರಲ್ಲಿ ಬರಬೇಕು ನಾಯಕರಲ್ಲಿ ಬದಲಾವಣೆಯಾಗದೆ ಪಕ್ಷದ ಸಂಘಟನೆ ಅಸಾಧ್ಯ ಎಂದು ಕಾರ್ಯಕರ್ತರು ಲಕ್ಷ್ಮೀಪುರ ಅಘಲಯ, ಸಂತೇಬಾಚಹಳ್ಳಿ, ಹರಪನಹಳ್ಳಿ ಕ್ರಾಸ್ ಮುಂತಾದ ಸಭೆಗಳಲ್ಲಿ ನಾಯಕರೊಂದಿಗೆ ವಾಗ್ವಾದ ನಡೆಸಿದರು.
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್,
ಮಾಜಿ ಶಾಸಕರುಗಳಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಮುಖಂಡರುಗಳಾದ ಎಂ.ಡಿ.ಕೃಷ್ಣಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಹರಳಹಳ್ಳಿ ವಿಶ್ವನಾಥ್, ಬಿ.ನಾಗೇಂದ್ರ ಕುಮಾರ್, ಕೆ.ಪಿ.ಸಿ.ಸಿ ಸದಸ್ಯ ಕಿಕ್ಕೇರಿ ಸುರೇಶ್, ಸೇರಿದಂತೆ ಆಯಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುಖಂಡರುಗಳು ಸಭೆಯಲ್ಲಿದ್ದು ಮಾತನಾಡಿದರು.