ಸರ್ಕಾರ ಪ್ರಜಾಪ್ರಭುತ್ವದ ವಿರುದ್ಧವಾಗಿ ವರ್ತಿಸುತ್ತಿದೆ-ಅಪರ್ಣ

ರಾಯಚೂರು,ಜ.೫- ರೈತ, ಕಾರ್ಮಿಕ ಹಾಗೂ ಅಗತ್ಯ ವಸ್ತುಗಳ ವಿರುದ್ಧವಾಗಿ ಕಾಯ್ದೆ ತಿದ್ದುಪಡಿಗೊಳಿಸಿ ಸರ್ಕಾರ ಪ್ರಜಾಪ್ರಭುತ್ವದ ವಿರುದ್ಧವಾಗಿ ವರ್ತಿಸುತ್ತಿದೆ
ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ರಾಜ್ಯಾಧ್ಯಕ್ಷೆ ಅಪರ್ಣಾ ಹೇಳಿದರು.
ಅವರು ನಗರದ ಸರ್ಕಾರಿ ನೌಕರರ ಸಂಘದ ಸ್ಪಂದನಾ ಭವನದಲ್ಲಿ ಆರ್‍ಕೆಎಸ್‌ನಿಂದ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದ ಕುರಿತು ಮಾತನಾಡಿದ ಅವರು, ಕೇಂದ್ರ ಸರ್ಕಾರ ರೈತ, ಕಾರ್ಮಿಕ ಹಾಗೂ ಗ್ರಾಹಕರಿಗೆ ವಿರುದ್ಧವಾಗಿ ೩ ಕಾಯ್ದೆಗಳನ್ನು ತಿದ್ದುಪಡಿಗೊಳಿಸಿ ಇಂದು ರೈತರು, ಕಾರ್ಮಿಕರು ತೊಂದರೆಗೊಳಗಾಗುವಂತೆ ಮಾಡಿದ್ದು, ಮೊದಲೇ ಕೋವಿಡ್-೧೯ ಮಹಾಮಾರಿಯಿಂದ ತತ್ತರಿಸಿದ ಜನರಿಗೆ ಈ ನೀತಿಗಳು ಮರಣ ಶಾಸನವಾಗಿದ್ದು ಕೇಂದ್ರದ ಮೋದಿ ಸರ್ಕಾರದ ಈ ನಡೆ ಖಂಡನೀಯವಾಗಿದೆ ಎಂದರು.
ಸರ್ಕಾರ ಎಪಿ.ಎಂಸಿ ಕಾಯ್ದೆಯನ್ನು ತಿದ್ದುಪಡಿಗೊಳಿಸಿದ್ದರಿಂದ ದೊಡ್ಡ ದೊಡ್ಡ ಕಾರ್ಪೋರೇಟ್ ಕಂಪನಿಗಳು ರೈತರಿಂದ ನೇರವಾಗಿ ಉತ್ಪನ್ನವನ್ನು ಕೊಂಡುಕೊಳ್ಳುತ್ತಾರೆ, ಇದರಿಂದ ರೈತ ನ್ಯಾಯವಾದ ಬೆಲೆ ದೊರಕದೆ ಕಂಗಾಲಗುತ್ತಾನೆ, ಹಾಗೂ ಎಪಿಎಂಸಿಗಳು ಕೂಡ ನಾಶವಾಗುತ್ತವೆ. ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ ಮಾಡಿ ಕಡುಬಡವರ ಪಾಲಿಗೆ ರಾಕ್ಷಸರಂತೆ ನಡೆದುಕೊಳ್ಳುತ್ತಿರುವ ಸರ್ಕಾರ ಅಗತ್ಯ ವಸ್ತುಗಳನ್ನು ಗೊದಾಮಿನಲ್ಲಿ ಶೇಖರಿಸಿ ನಂತರ ಬೇಡಿಕೆ ಹೆಚ್ಚದ ಮೇಲೆ ಗ್ರಾಹಕರಿಗೆ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಾರೆ ಇದರಿಂದ ಗ್ರಾಹಕರು ಸಂಕಷ್ಟಕ್ಕೆ ಸಿಲುಕುತ್ತಾರೆ. ಈ ರೀತಿಯಾಗಿ ಅಗತ್ಯ ವಸ್ತುಗಳನ್ನು ಗೋದಾಮಿನಲ್ಲಿ ಬಚ್ಚಿಟ್ಟುಕೊಳ್ಳಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಡುತ್ತಿದೆ. ಇಂದು ಮೋದಿ ಅಂಬಾನಿ ಅದಾನಿಯ ಜೇಬಿನಲ್ಲಿದ್ದು. ಅವರು ಹೇಳಿದ ರೀತಿಯಲ್ಲಿ ಕುಣಿಯುವ ಕೈಗೊಂಬೆಯಾಗಿದ್ದಾರೆ. ಬರೀ ಮಾತಿನಿಂದ ಜನರನ್ನು ಮರುಳು ಮಾಡಿ ಇಂದು ಜನರ ಹಕ್ಕನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ಆಕ್ರೊಶಗೊಂಡರು.
ಈ ಸಂದರ್ಭದಲ್ಲಿ ಆರ್‍ಕೆಎಸ್‌ನ ಜಿಲ್ಲಾ ಸಂಚಾಲಕ ರಾಮಣ್ಣ, ರಾಜ್ಯ ಖಜಾಂಚಿ ನಾಗಮ್ಮ, ಎಐಡಿಎಸ್‌ಓನ ಜಿಲ್ಲಾಧ್ಯಕ್ಷ ಮಹೇಶ ಚೀಕಲಪರ್ವಿ, ಚನ್ನಬಸವ ಜಾನೇಕಲ್, ಎನ್ ಎಸ್ ವೀರೇಶ ಸೇರಿದಂತೆ ರೈತರು ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.