ಸರ್ಕಾರ ತನ್ನ ವಿಫಲತೆ ಮುಚ್ಚಿಡುತ್ತಿದೆ : ಮಲಕಾರಿ

ಧಾರವಾಡ ಮಾ 31 : ಬಿಜೆಪಿ ಸರ್ಕಾರ ತನ್ನ ವಿಫಲತೆಯನ್ನು ಕೊರೊನಾ ಮೂಲಕ ಮುಚ್ಚಿಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಬಸವರಾಜ ಮಲಕಾರಿ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ನಮ್ಮ ಸುತ್ತಲಿನ ಪರಿಸರದಲ್ಲಿ ಕೊರೊನಾ ಉಲ್ಬಣಗೊಳ್ಳುತ್ತಿರುವು ಆತಂಕಕಾರಿ ಬೆಳವಣಿಗೆಯಾಗಿದ್ದು, ಆದರೆ ಸರ್ಕಾರ ರೋಗ ಉಲ್ಬಣಗೊಳ್ಳದಂತೆ ಸೂಕ್ತ ಮುಂಜಾಗ್ರತೆ ಕೈಗೊಳ್ಳುವುದು ಅತ್ಯವಶ್ಯಕ ಎಂದಿದ್ದಾರೆ.
ಕಳೆದ ಬಾರಿಯಂತೆ ಪಿಪಿಇ ಕಿಟ್ ಗಳು, ಆಸ್ಪತ್ರೆಗಲ್ಲಿ ವೆಂಟಿಲೇಟರ್ ಗಳು, ಸ್ಯಾನಿಟೈಸರ್, ಮಾಸ್ಕ್ ಗಳ ಕೊರತೆ ಆಗದಂತೆ ಸೂಕ್ತ ಮುಂಜಾಗ್ರತೆ ವಹಿಸುವುದು ಅತ್ಯವಶ್ಯಕ. ರೋಗದ ಹತೋಟಿಗೆ ಸಾರ್ವಜನಿಕವಾಗಿ ಹೆಚ್ಚು ಹೆಚ್ಚು ತಿಳುವಳಿಕೆ ಹಾಗೂ ಅರಿವು ಮೂಡಿಸುವ ಕೆಲಸ ಆಗಬೇಕು. ಆದರೆ ಸರ್ಕಾರ ತನ್ನ ಆಡಳಿತದಲ್ಲಿಯ ವಿಫಲತೆಗಳನ್ನು ಮರೆಮಾಚಲು ಹಾಗೂ ಜನಸಾಮಾನ್ಯರು ಹಾಗೂ ರೈತರು ಸರ್ಕಾರಗಳ ಕರಾಳ ಕಾನೂನುಗಳನ್ನು ವಿರೋಧಿಸಿ ಹಾಗೂ ಪೆಟ್ರೋಲ್, ಡಿಸೇಲ್ ಅಡಿಗೆ ಅನಿಲದ ಬೆಲೆ ಏರಿಕೆಯ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವುದು ಉಪ ಚುನಾವಣೆಗಳಲ್ಲಿ ಪರಿಣಾಮ ಬೀರಬಾರದೆಂಬ ಕಾರಣಕ್ಕೆ ಹಾಗೂ ಸರ್ಕಾರಕ್ಕೆ ಆಗುವ ಮುಜುಗರವನ್ನು ತಪ್ಪಿಸಿಕೊಳ್ಳಲು 15 ದಿನಗಳವರೆಗೆ ಪ್ರತಿಭಟನೆಗಳಿಗೆ ಮತ್ತು ಜಾತ್ರೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಿರುವುದು ಹಾಸ್ಯಾಸ್ಪದ ಎಂದು ಲೇವಡಿ ಮಾಡಿದ್ದಾರೆ.

ಬಿಜೆಪಿ ಸರ್ಕಾರ ಕಳೆದ ಬಾರಿಯಂತೆ ಕೊರೊನಾ ಎದುರಿಸಲು ವಿಫಲತೆಯನ್ನು ಹೊಂದದೇ ಹಾಗೂ ಸಾರ್ವಜನಿಕರಿಗೆ ಬಿಟ್ಟೀ ಸಲಹೆಗಳನ್ನು ನೀಡದೆ ತನ್ನ ಜವಾಬ್ದಾರಿ ನಿಭಾಯಿಸಲಿ ಅಲ್ಲದೇ ಕೊರೊನಾ ನೆಪ ಹೇಳಿಕೊಂಡು ಸಂವಿಧಾನದತ್ತವಾದ ಹೋರಾಟಗಳನ್ನು ಹತ್ತಿಕ್ಕುವ ಕೆಲಸವನ್ನು ಸರ್ಕಾರ ಮಾಡುತ್ತಿರುವುದು ಖಂಡನೀಯ ಎಂದು ಮಲಕಾರಿ ತಿಳಿಸಿದ್ದಾರೆ.