ಸಂಜೆವಾಣಿ ವಾರ್ತೆ
ಮಂಡ್ಯ : ಸೆ.26:- ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರ ಖುರ್ಚಿ ಉಳಿಸಿಕೊಳ್ಳುವ ಸಲುವಾಗಿ ರೈತರನ್ನು ಬಲಿಕೊಡುತ್ತಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಆರೋಪಿಸಿದರು.
ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿಯ ನಿರಂತರ ಧರಣಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದ್ದು, ನೀರನ್ನು ಬಿಡಲ್ಲ ಎಂದವರು ಹೆದರಿ ಈಗ ನೀರು ಬಿಡುತ್ತಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ಸಿಗರಿಗೆ ನಿಜವಾಗಿ ಪ್ರಜ್ಞೆ ಇದೆಯಾ ಎಂದು ಪ್ರಶ್ನಿಸಿದ ಅವರು, ರೈತರ ಬದುಕಿಗೆ ಮಣ್ಣು ಹಾಕಿದ್ದಾರೆ. ಕುಡಿಯುವ ನೀರು ಕೊಡಿ ಅಂದರೆ ಹಳ್ಳಿ ಹಳ್ಳಿಗೆ ರಮ್ಮು, ವಿಸ್ಕಿ, ಬ್ರಾಂದಿ ಕೊಡ್ತೀವಿ ಎಂದು ಹೇಳುತ್ತಾರೆ. ಎಲ್ಲದರಲ್ಲೂ ಲೂಟಿ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಯಾವಾಗ ಮುಖ್ಯಮಂತ್ರಿಯಾದರೋ ಆಗ ಮೋಸ ನಡೆಯುತ್ತಿದೆ ಎಂದು ದೂರಿದರು.
ನಮ್ಮ ರೈತರ ಒಂದು ಬೆಳೆಗೆ ನೀರು ಕೊಡುತ್ತಿಲ್ಲ, ತಮಿಳುನಾಡಿನ ಮೂರನೇ ಬೆಳೆಗೆ ನೀರು ಕೊಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದಂತೆ ತಮಿಳುನಾಡು ಸರ್ಕಾರದೊಂದಿಗೆ ಮಾತುಕತೆ ನಡೆಸಬೇಕಿತ್ತು. ಅವರ ಮನವೊಲಿಸಿ ನಿಮ್ಮ ರೈತರೂ ನಮ್ಮವರೇ, ಅದೇ ರೀತಿ ನಮ್ಮ ರೈತರೂ ಸಹ ನಿಮ್ಮವರೇ. ಕನಿಷ್ಟ ಒಂದು ಬೆಳೆಗಾದರೂ ನೀರು ಉಳಿಸಿಕೊಡಿ ಎಂದು ಅವರ ಮನವೊಲಿಸುವ ಪ್ರಯತ್ನವನ್ನು ಸರ್ಕಾರ ಮಾಡಬೇಕಿತ್ತು. ಅದು ಬಿಟ್ಟು ನ್ಯಾಯಾಲಯ, ಪ್ರಾಧಿಕಾರದ ಮೂಲಕ ಸಮಸ್ಯೆ ಬಗೆಹರಿಸಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಒಂದು ವೇಳೆ ಕಾನೂನು ಹೋರಾಟದ ಮೂಲಕವೇ ಸಮಸ್ಯೆ ಬಗೆಹರಿಸುವುದಾದರೆ ತಜ್ಞರ ತಂಡವೊಂದನ್ನು ಕಳುಹಿಸಿ ವಾಸ್ತವ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ನೀಡುವ ಬಿಡುವ ನಿರ್ಧಾರವನ್ನು ಪ್ರಕಟಿಸಲು ಪ್ರಾಧಿಕಾರಕ್ಕೆ ಮನವಿ ಮಾಡಬೇಕಿತ್ತು ಎಂದು ಹೇಳಿದರು.
ಇದಾವುದನ್ನೂ ಮಾಡದ ಸರ್ಕಾರ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟಿಗೆ ಅರ್ಜಿ ಹಾಕಿದ ತಕ್ಷಣವೇ ಪ್ರಾಧಿಕಾರದ ಆದೇಶದಂತೆ ನೀರು ಬಿಡುಗಡೆ ಮಾಡಿ ರಾಜ್ಯದ ರೈತರ ಹಿತವನ್ನು ಬಲಿಕೊಟ್ಟಿದೆ ಎಂದು ಆರೋಪಿಸಿದರು.
ಲೋಕಸಭಾ ಚುನಾವಣೆಗೆ ಅಲಯನ್ಸ್ ಮಾಡಿಕೊಂಡ ವೇಳೆ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರನ್ನು ತಬ್ಬಿಕೊಂಡಿದ್ದೇ ಭಾಗ್ಯ. 5 ಲಕ್ಷಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಹೇಳುತ್ತಾರೆ. ನೀರು ಬಿಡಲ್ಲ ಎಂದು ಹೇಳಿ ನೀರು ಬಿಟ್ಟಿದ್ದೀರಾ, ನಿಮಗೆ ಮಾನ ಮರ್ಯಾದೆ ಇದೆಯಾ, ರೈತರ ಹಿತ ಕಾಪಾಡಲು ಸಾಧ್ಯವಾಗದ ನಿಮಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆತ್ಮಸಾಕ್ಷಿ ಇದ್ದಿದ್ದರೆ ತಮಿಳುನಾಡಿಗೆ ಹೇಗೆ ನೀವು ಸಹಾಯ ಮಾಡುತ್ತಿದ್ದೀರಿ, ಮೇಕೆದಾಟಿನ ವಿಚಾರವಾಗಿ ಒಂದೂ ಪ್ರಯತ್ನ ಮಾಡಿಲ್ಲ. ಮೇಕೆಗಳನ್ನು ನುಂಗುವುದನ್ನು ಬಿಟ್ಟರೆ ಇವರು ಮೇಕೆದಾಟದಲ್ಲಿ ಏನೂ ಇಟ್ಟಿಲ್ಲ. ಕೃಷಿ ಇಲಾಖೆಗೆ ಶೇ. 50ರಷ್ಟು ಬಜೆಟ್ ಇಟ್ಟಿದ್ದೀರಾ, ಇವರು ಮನುಷ್ಯರಾ, ನಾವಿದ್ದಾಗ ಯಾವುದೇ ಸಂಕಷ್ಟ ಇರಲಿಲ್ಲ. ಲೂಟಿ ಮಾಡುವಲ್ಲಿ ಇವರು ಮುಂಚೂಣಿಯಲ್ಲಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.