ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ: ಕೋಡಿಹಳ್ಳಿ

ತುಮಕೂರು, ಏ. ೮- ರಾಜ್ಯ ರಸ್ತೆ ಸಾರಿಗೆ ನೌಕರರಿಗೆ ಸರ್ಕಾರ ಈ ಹಿಂದೆ ನೀಡಿದ್ದ ಮಾತಿನಂತೆ ನಡೆದುಕೊಳ್ಳಬೇಕು. ನೌಕರರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ರೈತ ನಾಯಕ ಹಾಗೂ ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು.
ರಾಜ್ಯಾದ್ಯಂತ ೧ ಲಕ್ಷ ೩೪ ಸಾವಿರ ಮಂದಿ ಸಾರಿಗೆ ನೌಕರರು ಅರ್ಧ ಸಂಬಳಕ್ಕೆ ದುಡಿಯುತ್ತಿದ್ದು, ಡಿಸೆಂಬರ್‍ನಲ್ಲಿ ಮುಷ್ಕರ ಹೂಡಿದ ಸಂದರ್ಭದಲ್ಲಿ ೬ನೇ ವೇತನ ಆಯೋಗದ ಭರವಸೆಯನ್ನು ಸರ್ಕಾರ ನೀಡಿತ್ತು. ಸರ್ಕಾರದ ಈ ಭರವಸೆ ಮೇರೆಗೆ ಮುಷ್ಕರ ಹಿಂಪಡೆಯಲಾಗಿತ್ತು. ಆದರೆ ಸಾರಿಗೆ ಸಚಿವರು ಹಾಗೂ ಸರ್ಕಾರ ಅಂದು ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ಶೇ.೮ ರಷ್ಟು ಮಾತ್ರ ಹೆಚ್ಚಳ ಮಾಡಿದ್ದು ಸರಿಯೇ, ತಮಗೆ ಬೇಕಾದವರಿಗೆ ಬೇಕಾದಷ್ಟು ಕೋಟಿ ಹಂಚಿಕೆ ಮಾಡುವ ಸರ್ಕಾರಕ್ಕೆ ದುಡಿಯುವ ವರ್ಗಕ್ಕೆ ಬೊಕ್ಕಸದಲ್ಲಿ ೭೦೦ ಕೋಟಿ ತೆಗೆದಿಡಲು ಸಾಧ್ಯವಿಲ್ಲವೇ ಎಂದು ಅವರು ಪ್ರಶ್ನಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ೬ನೇ ವೇತನ ಆಯೋಗದ ಶಿಫಾರಸ್ಸು ಜಾರಿ ಮಾಡಬೇಕೆಂದು ಅನಿರ್ಧಿಷ್ಟಾವಧಿ ಸತ್ಯಾಗ್ರಹ ನಡೆಸುತ್ತಿರುವ ಸಾರಿಗೆ ನೌಕರರಿಗೆ ಪೂರ್ಣ ವೇತನ ಕೊಡಲು ಸರ್ಕಾರ ಅನುದಾನದ ಕೊರತೆ ಎನ್ನುತ್ತಿದೆ. ಆದರೆ ಜಾತಿವಾರು ಅಭಿವೃದ್ಧಿ ನಿಗಮ, ಮಂಡಳಿ, ಪ್ರಾಧಿಕಾರ, ಮಠಗಳಿಗೆ ಕೋಟಿಗಟ್ಟಲೇ ಕೊಡಲು ಹಣ ಎಲ್ಲಿದೆ. ಮೊದಲು ಕೊಟ್ಟ ಮಾತಿನಂತೆ ನಡೆದುಕೊಳ್ಳಿ. ಅಲ್ಲಿಯವರೆಗೂ ನೌಕರರ ಮುಷ್ಕರ ನಿಲ್ಲದು ಎಂದು ಅವರು ಹೇಳಿದರು.
ಒಂದು ಚಳವಳಿಯನ್ನು ಹತ್ತಿಕ್ಕಲು ಸರ್ಕಾರ ತನ್ನ ಎಲ್ಲಾ ಶಕ್ತಿ ಮೀರಿ ಪ್ರಯತ್ನ ನಡೆಸುತ್ತಿದೆ. ಬಸ್ ಬಸ್ ಓಡಿಸಲು ಪರ್ಯಾಯವಾಗಿ ಬೇರೆ ಬಸ್‌ಗಳನ್ನು ಬಿಡಲು ಪ್ರಯತ್ನ ಮಾಡುತ್ತಿದೆ. ಅದು ಎಷ್ಟು ಫಲಪ್ರದಕಾರಿಯಾಗುವುದೋ ಗೊತ್ತಿಲ್ಲ. ಈ ವಿಚಾರದಲ್ಲಿ ಸರ್ಕಾರ ವಿಫಲವಾಗಲಿದ್ದು, ನೌಕರರಿಗೆ ನ್ಯಾಯ ಕೊಡುವ ಬದಲು ದಮನಕಾರಿ ಪ್ರಯತ್ನ ನಡೆಸುತ್ತಿರುವುದು ಸರಿಯಲ್ಲ ಎಂದರು.
ಕೊರೊನಾ ಸಂದರ್ಭದಲ್ಲಿ ಹಣವಿಲ್ಲ, ಸಂಸ್ಥೆ ಲಾಭದಲ್ಲಿಲ್ಲ ಎನ್ನುತ್ತಿದ್ದಾರೆ. ಸೇವಾ ವಲಯದ ರಸ್ತೆ ಸಾರಿಗೆ ನಿಗಮಗಳು ಯಾವ ವರ್ಷ ಲಾಭದಲ್ಲಿದ್ದವು ತಿಳಿಸಲಿ. ನೌಕರರಿಗೆ ನ್ಯಾಯ ಸಿಗುವವರೆಗೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಎಸ್ಮಾ ಜಾರಿಗೆ ಹೆದರವುದಿಲ್ಲ ಎಂದ ಅವರು, ನಮಗೆ ಅನ್ಯಾಯವಾಗುತ್ತಿದೆ, ಸರಿಪಡಿಸಿ ಎಂದು ಕೇಳಿದ್ದಕ್ಕೆ ಎಸ್ಮಾ ಜಾರಿ ಮಾಡುವುದಾಗಿ ಬೆದರಿಕೆ ಹಾಕುತ್ತಾರೆಯೇ, ನಾವು ಯಾವುದಕ್ಕೂ ಹೆದರುವುದಿಲ್ಲ ಎಂದರು.