ಸರ್ಕಾರ ಎಫ್.ಆರ್.ಪಿ ದರ ಮರು ಪರಿಶೀಲನೆ ಮಾಡಿ ಪ್ರತಿಟನ್ ಕಬ್ಬಿಗೆ 3600 ದರ ನೀಡಿಲಿ : ಸುರೇಶ ಚೌಗಲೆ

ಕಾಗವಾಡ : ನ.20:ಕಬ್ಬು ಬೆಳೆಗಾರರಿಗೆ ಎಫ್.ಆರ್.ಪಿ. ಕ್ಕಿಂತ ಹೆಚ್ಚಿನ ದರ ಘೋಷಣೆ ಮಾಡಬೇಕು. ಪ್ರಸಕ್ತ ಹಂಗಾಮಿನಲ್ಲಿ ದರ ಘೋಷಣೆ ಮಾಡದೇ ಹಂಗಾಮು ಪ್ರಾರಂಭಿಸಿರುವ ಕಾರ್ಖಾನೆಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಸಕ್ಕರೆ ಕಾರ್ಖಾನೆಗಳು ನೋಟಿಸ್ ಬೋರ್ಡ ಮೇಲೆ ಎಚ್.ಎನ್.ಟಿ. ಖರ್ಚು ವೆಚ್ಚಗಳು ಕುರಿತು ವಿವರಣೆ ಪ್ರಕಟಿಸಬೇಕು. ಕಬ್ಬು ಸಾಗಾಟ ಮಾಡಿದ 15 ದಿನಗಳ ನಂತರ ರೈತರ ಖಾತೆಗೆ ಹಣ ಜಮೆ ಮಾಡಬೇಕು. ಮೇಲಿನ ಎಲ್ಲ ಬೇಡಿಕೆಗಳು ಈಡೇರದೇ ಹೋದಲ್ಲಿ ಬರುವ ಬೆಳಗಾವಿಯಲ್ಲಿ ಜರುಗುವ ಚಳಿಗಾಲ ಅಧಿವೇಶನ ಸಮಯದಲ್ಲಿ ಸುವರ್ಣ ಸೌಧದ ಮುಂದೆ ಕಬ್ಬು ಬೆಳೆಗಾರರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಸ್ವಾಭಿಮಾನಿ ರೈತ ಸಂಘಟನೆ ಹಾಗೂ ಕಬ್ಬು ಬೆಳೆಗಾರರ ಸಂಘದ ಮುಖಂಡ ಸುರೇಶ ಚೌಗಲೆ ಹೇಳಿದರು.
ಅವರು ಶುಕ್ರವಾರ ದಿ. 19 ರಂದು ಶಿರಗುಪ್ಪಿ ಗ್ರಾಮದ ಬಸವೇಶ್ವರ ಯಾತ ನೀರಾವರಿ ಸಂಘದ ಕಾರ್ಯಾಲಯದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಕಳೆದ ಹಲವಾರು ವರ್ಷಗಳಿಂದ ಸಕ್ಕರೆ ಕಾರ್ಖಾನೆಗಳು ಎಫ್.ಆರ್.ಪಿ. ಗಿಂತ ಕಡಿಮೆ ದರ ನೀಡುತ್ತಾ ಬಂದಿವೆ. ಆದರೆ ಕಳೆದ ಐದಾರು ವರ್ಷಗಳಿಂದ ಪ್ರತಿಯೊಂದು ಬೆಲೆಗಳು ಗಗನಕ್ಕೇರುತ್ತಿದ್ದು, ರೈತರ ಖರ್ಚು ವೆಚ್ಚಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಈಗ ಸರ್ಕಾರ ಘೋಷಣೆ ಮಾಡುತ್ತಿರುವ ಎಫ್.ಆರ್.ಪಿ. ದರ ಯಾವುದಕ್ಕೂ ಸಾಲದಂತಾಗಿದೆ. ಕಾರಣ ಎಫ್.ಆರ್.ಪಿ.ಯನ್ನು ಮರು ಪರಿಶೀಲನೆ ಮಾಡಿ ರೈತರಿಗೆ ಪ್ರತಿಟನ್ ಕಬ್ಬಿಗೆ 3600 ದರ ನೀಡುವಂತೆ ಒತ್ತಾಯಿಸಿದರು.
ದರ ಘೋಷಣೆ ಮಾಡದೇ, ಸರಿಯಾದ ಸಮಯದಲ್ಲಿ ರೈತರ ಖಾತೆಗೆ ಹಣ ಜಮೆ ಮಾಡದೇ ಇರುವ, ಎಚ್.ಎನ್.ಟಿ. ಪ್ರಕಟಿಸದೇ ಇರುವ ಹಾಗೂ ಸರ್ಕಾರದ ನಿಯಮಗಳನ್ನು ಗಾಳಿಗೆ ತುರುತ್ತಿರುವ ಸಕ್ಕರೆ ಕಾರ್ಖಾನೆಗಳ ಮೇಲೆ ಸಕ್ಕರೆ ಆಯುಕ್ತರು ಸೂಕ್ತ ಕಾನೂನುಕ್ರಮ ಕೈಗೊಳ್ಳಬೇಕು ಎಂದು ಸುರೇಶ ಚೌಗಲೆ ಒತ್ತಾಯಿಸಿದರು.
ಈ ಸಮಯದಲ್ಲಿ ಸುರೇಶ ಚೌಗಲೆ, ವಿಜಯ ಅಕಿವಾಟೆ, ಸುನೀಲ ಕಾತ್ರಾಳೆ, ಸುನೀಲ ಚೌಗಲೆ, ದಾದಾಗೌಡ ಪಾಟೀಲ, ಮಾರುತಿ ಧನಗರ, ಅಪ್ಪಾಸಾಬ ಕುರುಂದವಾಡೆ, ನಂದು ಅಕಿವಾಟೆ, ಅಪ್ಪಾಸಾಬ ತಮದಡ್ಡಿ, ಪ್ರಕಾಶ ಅಕಿವಾಟೆ, ಸುರೇಶ ಕುರುಂದವಾಡೆ, ಮಹಾದೇವ ಬೆಳ್ಳಂಕಿ, ದಾದಾಸಾಹೇಬ ಪಾಟೀಲ, ಕಾಕಾಸಾಹೇಬ ನರಸಗೌಡರ, ಸುರಜ ಪುದಾಳೆ, ಜಗದೀಶ ಕುಸನಾಳೆ, ಸುನೀಲ ಗುಂಡೆವಾಡೆ, ಶ್ರೀಕಾಂತ ಚೌಗಲೆ, ಪ್ರಕಾಶ ಹೇಮಗಿರಿ, ಸಾವಂತ ಮೋನೆ, ಕುಮಾರ ಅಪರಾಜ, ಸಂಜು ಭಿರಡೆ, ಸಂಜು ಕುಡಚೆ, ಅಣ್ಣಾಸಾಬ ಅವಟಿ ಸೇರಿದಂತೆ ಅನೇಕ ರೈತರು ಇದ್ದರು,