ಸರ್ಕಾರ ಆಸ್ಪತ್ರೆಗೆ ವೈದ್ಯರು, ಸಿಬ್ಬಂದಿಗಳನ್ನು ನೇಮಿಸಲು ಆಗ್ರಹ

ರಾಯಚೂರು,ಜು.೨೯- ರಾಯಚೂರು ನಗರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ೬೦ ಹಾಸಿಗೆಗಳ ಮಹಿಳಾ ಮಕ್ಕಳ ಆಸ್ಪತ್ರೆಗೆ ಕೂಡಲೇ ಸರ್ಕಾರ ವೈದ್ಯರು,ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಜಿಲ್ಲಾ ಸಂಚಾಲಕ ಎಸ್.ನರಸಿಂಹಲು ಒತ್ತಾಯಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ ೧೫ ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಚುನಾವಣೆಗೆ ಮುಂಚೆ ಗಬ್ಬೂರಿನಲ್ಲಿ ಕೇಂದ್ರ ಗೃಹಸಚಿವರಾದ ಅಮಿತ್ ಷಾ ರವರು ಉದ್ಘಾಟಿಸಿದ್ದರು. ಆದರೆ ಇದುವರೆಗೆ ಅಗತ್ಯ ಸಿಬ್ಬಂದಿಗಳನ್ನು ಒದಗಿಸದೆ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.
ಉದ್ಘಾಟನೆಯಾಗಿ ೬ ತಿಂಗಳು ಕಳೆಯುತ್ತಾ ಬಂದರೂ ಕೂಡ ಅಗತ್ಯವಾದ ವೈದ್ಯರು ಹಾಗೂ ಸಿಬ್ಬಂದಿಗಳ ನೇಮಿಸದ ಖಾಸಗಿ ಆಸ್ಪತ್ರೆಗಳಿಗೆ ವರದಾನವಾಗುವಂತೆ ಮಾಡಲಾಗಿದೆ. ಈ ಆಸ್ಪತ್ರೆಯ ವ್ಯವಸ್ಥೆಯ ಬಗ್ಗೆ ಜಿಲ್ಲಾಡಳಿತ, ಜನಪ್ರತಿನಿಧಿಗಳು , ಆರೋಗ್ಯ ಸಚಿವರ ಗಮನಕ್ಕಿದ್ದರೂ ಕೂಡ ಸಿಬ್ಬಂದಿಗಳನ್ನು ಮಾತ್ರ ನೇಮಿಸುತ್ತಿಲ್ಲ. ಬಡಜನರಿಗೆ ಇರುವ ರಿಮ್ಸ್ ಆಸ್ಪತ್ರೆಯಲ್ಲಿ ಪ್ರತಿದಿನ ೩೦ ರಿಂದ ೪೦ ಹೆರಿಗೆಗಳು ಆಗುತ್ತಿದ್ದು ಅಗತ್ಯವಾದ ಸೌಲಭ್ಯಗಳು ಸಿಗದೆ ಬಾಣಂತಿಯರು ತೊಂದರೆ ಅನುಭವಿಸುವಂತಾಗಿದೆ.ಈಗಾಗಿ ಕೂಡಲೇ ರಿಮ್ಸ್ ಕಾರ್ಯಭಾರವನ್ನು ಕಡಿಮೆ ಮಾಡಲು ನೂತನವಾಗಿ ನಿರ್ಮಾಣವಾದ ಕಟ್ಟಡದಲ್ಲಿ ಅಗತ್ಯವಾದ ಸೌಕರ್ಯಗಳನ್ನು ಒದಗಿಸಿ , ವೈದ್ಯರು ಹಾಗೂ ಇನ್ನಿತರ ಸಿಬ್ಬಂದಿಯನ್ನು ನೇಮಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸೈಯದ್ ವಾಹೀದ್,ಅನ್ವಾರ್, ಉದಯಕುಮಾರ, ಹನುಮೇಶ್ ಆರೋಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.