ಸರ್ಕಾರ ಅಸ್ಥಿರ ನನಗೇನೂ ಗೊತ್ತಿಲ್ಲ: ಸಿದ್ದು

ಡಿಕೆಶಿಯನ್ನೇ ಕೇಳಿ
(ಸಂಜೆವಾಣಿ ಪ್ರತಿನಿಧಿಯಿಂದ)
ಇಂದು ಬೆಳಿಗ್ಗೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೂರಾರು ಮಹಿಳೆಯರು ಕೈಕುಲಿಕಿ ಶುಭಾಶಯ ಕೋರಿದರು.

ಬೆಂಗಳೂರು, ಜು. ೨೫- ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಸಿಂಗಾಪೂರ್‌ನಲ್ಲಿ ಕುಳಿತು ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುತ್ತಿದ್ದಾರೆ ಎಂಬ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಉಪಮುಖ್ಯಮಂತ್ರಿ ಶಿವಕುಮಾರ್ ಅವರನ್ನೆ ಈ ಬಗ್ಗೆ ಕೇಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಹಾವೇರಿಗೆ ತೆರಳುವ ಮುನ್ನ ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭದಲ್ಲಿ ಸರ್ಕಾರ ಅಸ್ಥಿರಗೊಳಿಸಲು ಸಿಂಗಾಪೂರ್‌ನಲ್ಲಿ ಷಡ್ಯಂತ್ರ ನಡೆದಿದೆ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಇದನ್ನು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಅವರನ್ನೆ ಕೇಳಿ, ನನಗೇನೂ ಗೊತ್ತಿಲ್ಲ ಎಂದಷ್ಟೆ ಹೇಳಿದರು.
ಮೈತ್ರಿಯಾದರೆ ಭಯ ಇಲ್ಲ
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಈ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಆದರೂ ಇಬ್ಬರ ನಡುವೆ ಚರ್ಚೆ ನಡೆದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿ, ನಮಗೇನೂ ಭಯವಿಲ್ಲ ಎಂದರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್ ಮೈತ್ರಿಯಾದರೂ ಮಾಡಿಕೊಳ್ಳಲಿ, ಮೈತ್ರಿ ಮಾಡಿಕೊಳ್ಳದೇ ಇರಲಿ, ಕಾಂಗ್ರೆಸ್ ಪಕ್ಷವಂತೂ ೧೫ ರಿಂದ ೨೦ ಸ್ಥಾನ ಗೆಲ್ಲುವುದು ನಿಶ್ಚಿತ ಎಂದು ಸಿದ್ದರಾಮಯ್ಯ ಹೇಳಿದರು.
ಮೌಢ್ಯದಲ್ಲಿ ನಂಬಿಕೆ ಇಲ್ಲ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಬರ ಪರಿಸ್ಥಿತಿ ತಲೆದೋರುತ್ತದೆ ಎಂದು ಕಳೆದ ತಿಂಗಳು ಬಿಜೆಪಿಯವರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈಗ ಮಳೆ ಬರುತ್ತಿಲ್ಲವೇ, ಹಿಂದೆ ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಅತಿವೃಷ್ಠಿಯಾಗಿ ಲಕ್ಷ ಮನೆಗಳಿಗೆ ಹಾನಿಯಾಗಿತ್ತು. ಆ ಬಗ್ಗೆ ಅವರೇನು ಹೇಳುತ್ತಾರೆ. ಮಳೆ ಬರುವುದು, ಬಿಡುವುದು ಎಲ್ಲ ಪ್ರಕೃತಿ ನಿಯಮ. ನನಗೆ ಮೌಢ್ಯವನ್ನು ನಂಬಲ್ಲ. ಮೂಢ ನಂಬಿಕೆಗಳ ಬಗ್ಗೆ ತಲೆಕೆಡಿಸಿಕೊಳ್ಳಲ ಎಂದರು.
ಈಗ ಜಗತ್ತಿನಲ್ಲಿ ಹವಾಮಾನ ಬದಲಾವಣೆಯಾಗುತ್ತಿದೆ. ಜೂನ್‌ನಲ್ಲಿ ಬರಬೇಕಾಗಿದ್ದ ಮುಂಗಾರು ಜುಲೈನಲ್ಲಿ ಬರುತ್ತಿದೆ. ಇದೆಲ್ಲಾ ಹವಮಾನ ಬದಲಾವಣೆಯಿಂದ ಆಗುತ್ತಿರುವುದು. ಇದಕ್ಕೆಲ್ಲ ಮೌಢ್ಯವನ್ನು ತಳಕು ಹಾಕುವುದು ಸರಿಯಲ್ಲ ಎಂದು ಹೇಳಿದರು.
ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ
ರಾಜ್ಯದ ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಕೆಲಸ ಆರಂಭವಾಗಿದೆ. ಸಚಿವರ ತಂಡಗಳು ಭೇಟಿ ನೀಡುತ್ತಿವೆ. ಸಚಿವ ಕೃಷ್ಣಭೈರೇಗೌಡ ಕೊಡಗಿಗೆ ಭೇಟಿ ನೀಡಿದ್ದಾರೆ. ನಾನು ಇಂದು ಹಾವೇರಿ ಜಿಲ್ಲೆಗೆ ಭೇಟಿ ನೀಡಿ ಮಳೆ ಪರಿಸ್ಥಿತಿಯನ್ನು ಪರಿಶೀಲಿಸುತ್ತೇನೆ. ಸತ್ತಿರುವ ರೈತರ ಕುಟುಂಬಗಳಿಗೂ ಸಾಂತ್ವನ ಹೇಳುತ್ತೇನೆ ಎಂದರು.
ಮುಂದಿನ ದಿನಗಳಲ್ಲಿ ಮಳೆ ಪೀಡಿತ ಉತ್ತರ ಕನ್ನಡ, ಮಂಗಳೂರು, ಉಡುಪಿ ಜಿಲ್ಲೆಗಳಿಗೂ ಭೇಟಿ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಈಗ ರಾಜ್ಯದಲ್ಲಿ ಉತ್ತಮ ಮಳೆ ಬೀಳುತ್ತಿದೆ. ಜೂನ್‌ನಲ್ಲಿ ಮಳೆ ಕೊರತೆಯಾಗಿತ್ತು. ಆದರೆ ಜುಲೈನಲ್ಲಿ ಉತ್ತಮ ಮಳೆಯಾಗಿದೆ ಎಂದರು.
ಸಿಎಲ್‌ಪಿಯಲ್ಲಿ ಚರ್ಚೆ
ಕೆಲ ಶಾಸಕರು ಸಚಿವರುಗಳು ತಮಗೆ ಸ್ಪಂದಿಸುತ್ತಿಲ್ಲ ಎಂಬ ಪತ್ರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಎಲ್ಲ ವಿಚಾರಗಳ ಬಗ್ಗೆ ಚರ್ಚಿಸಲು ಈ ತಿಂಗಳ ೨೭ ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಯಾವುದೇ ಶಾಸಕರು ತಮಗೆ ಯಾವುದೇ ದೂರು ನೀಡಿಲ್ಲ ಎಂದು ಅವರು ಹೇಳಿದರು.