ಸರ್ಕಾರ ಅಭದ್ರತೆ ಅಸಾಧ್ಯ

ಹುಬ್ಬಳ್ಳಿ,ಆ.೧೫: ಕರ್ನಾಟಕದಲ್ಲಿ ಬಿಜೆಪಿಯಿಂದ ಕಾಂಗ್ರೆಸ್ ಸರ್ಕಾರವನ್ನು ಅಭದ್ರಗೊಳಿಸುವುದು ಅಸಾಧ್ಯದ ಮಾತು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಜಯ ಸಿಂಗ್ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನ್ನ ಬಳಿಯಿರುವ, ೪೦ ಪರ್ಸೆಂಟ್, ಹಣದಿಂದ ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸಬೇಕೆಂದು ಬಿಜೆಪಿ ಲೆಕ್ಕ ಹಾಕಿದೆ ಆದರೆ ಅದು ನಡೆಯದು ಎಂದರು.
ಕಾಂಗ್ರೆಸ್ ಪಕ್ಷ ಒಗ್ಗಟ್ಟಾಗಿದೆ, ಈ ಬಾರಿ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಸಾಧ್ಯವಿಲ್ಲ ಎಂದು ಅವರು ನುಡಿದರು.
ನಮ್ಮಲ್ಲಿ ಹಿಂದೂ ರಾಷ್ಟ್ರದ ಪ್ರಶ್ನೆಯಿಲ್ಲ, ದೇಶ ಎಲ್ಲರಿಗೂ ಸೇರಿದ್ದಾಗಿದೆ ಎಂದ ಅವರು ಪಾಕಿಸ್ತಾನ ಇಸ್ಲಾಂ ರಾಷ್ಟ್ರ ಎಂದು ಘೋಷಿಸಿಕೊಂಡ ನಂತರ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ, ಅಲ್ಲಿ ಮುಸಲ್ಮಾನರೇ ಮುಸಲ್ಮಾನರನ್ನು ಹೊಡೆದು ಹಾಕಿದ್ದಾರೆ ಎಂದು ಹೇಳಿದರು.
ನಮ್ಮ ದೇಶದಲ್ಲಿ ಎಲ್ಲ ಧರ್ಮೀಯರೂ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ.
ಭಾರತೀಯ ಸಂವಿಧಾನದಲ್ಲಿ ಎಲ್ಲ ವ್ಯಕ್ತಿಗಳಿಗೂ ತಮ್ಮ ಧರ್ಮಪಾಲನೆಗೆ ಅವಕಾಶವಿದೆ, ಭಾರತದಲ್ಲಿ ಸಂವಿಧಾನವೇ ಸರ್ವಸ್ವ ಆಗಿದೆ ಎಂದು ಅವರು ನುಡಿದರು.
ಮಣಿಪುರದಲ್ಲಿ ಮುಂದುವರಿದ ಗಲಭೆ ವಿಚಾರ ಕುರಿತಾದ ಪ್ರಶ್ನೆಗೆ ಉತ್ತರಿಸುತ್ತ, ಬಿಜೆಪಿ ತನ್ನ ಸ್ವಾರ್ಥಕ್ಕಾಗಿ ಈ ರೀತಿಯ ಪಿತೂರಿಗಳನ್ನು ಮಾಡುತ್ತದೆ, ಮಣಿಪುರದ ತಂತ್ರವನ್ನೇ ಮತ್ತೆ ಜಮ್ಮು-ಕಾಶ್ಮೀರದಲ್ಲಿ ಪ್ರಯೋಗಿಸಲು ಹೊರಟಿದೆ ಎಂದು ದಿಗ್ವಿಜಯಸಿಂಗ್ ಹೇಳಿದರು.