
ಚಾಮರಾಜನಗರ, ಮಾ.15:- ನಗರದ ಜಿಲ್ಲಾಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ಎಲ್ಲಾ ಸೌಲಭ್ಯವಿದ್ದರು ತಜ್ಞ ವೈದ್ಯರ ಕೊರತೆಯಿಂದ ಬಹಳ ತೊಂದರೆಯಾಗುತ್ತಿದೆ. ಕೂಡಲೇ ತಜ್ಞ ವೈದ್ಯರನ್ನು ನೇಮಕ ಮಾಡುವಂತೆ ಪರಿಶಿಷ್ಟ ಜಾತಿ ಹಾಗೂ ಪ. ವರ್ಗಗಳ ಹಿತಾರಕ್ಷಣಾ ಸಮಿತಿಯಲ್ಲಿ ಒತ್ತಾಯಿಸಲಾಯಿತು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಹಶೀಲ್ದಾರ್ ಬಸವರಾಜು ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟ ಜಾತಿ ಹಾಗೂ ಪ.ವರ್ಗಗಳ ಸಮಿತಿ ಸಭೆಯಲ್ಲಿ ದಲಿತ ಮುಖಂಡ ಸಿ.ಕೆ. ಮಂಜುನಾಥ್ ಮಾತನಾಡಿ, ಸರ್ಕಾರಿ ಅಸ್ಪತ್ರೆಯಲ್ಲಿ ವೈದ್ಯರ ಇಲ್ಲದೇ ನಗರದ ಅಂಬೇಡ್ಕರ್ ಬೀದಿಯ ಗರ್ಭೀಣಿಯೊಬ್ಬರು ಖಾಸಗಿ ಅಸ್ಪತ್ರೆಗೆ ದಾಖಲಾಗಿ ಪ್ರಾಣ ಕಳೆದುಕೊಂಡರು. ಸರ್ಕಾರಿ ಹೆರಿಗೆ ಅಸ್ಪತ್ರೆಯಲ್ಲಿ ಎಲ್ಲಾ ಸೌಲಭ್ಯಗಳು ಇದೆ. ಆದರೆ, ಹೆರಿಗೆ ಮಾಡಿಸುವ ತಜ್ಞ ವೈದ್ಯರು, ಅರವಳಿಕೆ ತಜ್ಞರು, ರಕ್ತನಿಧಿ ಘಟಕ ಮತ್ತು ಅನುಭವಿ ಶುಶ್ರೂಕಿಯರು ಇಲ್ಲದೇ ತೊಂದರೆಯಾಗುತ್ತಿದೆ. ಮಕ್ಕಳು ತಜ್ಞರು ಸಹ ಇಲ್ಲದೇ ಈ ಭಾಗದ ಮಹಿಳೆಯರು ಬಹಳ ತೊಂದರೆ ಮಾಡುತ್ತಿದ್ದಾರೆ ಎಂದು ದೂರಿದರು.
ವೈದ್ಯಾಕೀಯ ಬೋಧನಾ ಅಸ್ಪತ್ರೆ ಬಂದರೆ ಎಲ್ಲರು ಸೌಲಭ್ಯದ ಜೊತೆಗೆ ವೈದ್ಯರ ತಂಡವೇ ಇರುತ್ತವೆ ಎಂಬ ನಂಬಿಕೆ ನಮ್ಮಲ್ಲಿತ್ತು. ಆದರೆ, ಹೆರಿಗೆ ವಿಭಾಗದಲ್ಲಿ ಈ ಎಲ್ಲಾ ವೈದ್ಯರ ಕೊರತೆ ಇದೆ. ಹೀಗಾಗಿ ಬಹಳಷ್ಟು ಮಂದಿ ಹೆರಿಗೆಗೆ ಮೈಸೂರಿಗೆ ಹೋಗುತ್ತಿದ್ದರೆ, ಇನ್ನು ಹಣ ಇಲ್ಲದವರು ನಗರದ ಖಾಸಗಿ ಅಸ್ಪತ್ರೆಗೆ ತೆರಳಿ ಪ್ರಾಣ ಕಳೆದು ಕೊಳ್ಳುತ್ತಿದ್ದಾರೆ. ಇದಕ್ಕೆ ತಾಜಾ ನಿರ್ದಶನವೆಂಬಂತೆ ಅಂಬೇಡ್ಕರ್ ಬಡಾವಣೆಯ ಗರ್ಭೀಣಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಮುಖಂಡರು ಆಗ್ರಹಿಸಿದರು.
ವಾರದ ರಜೆ ದಿನಗಳಲ್ಲಿ ಹೆರಿಗೆ ಅಸ್ಪತ್ರೆಯಲ್ಲಿ ಒಬ್ಬ ವೈದ್ಯರು ಇರುವುದಿಲ್ಲ. ಇನ್ನು ಹೆರಿಗೆ ಮಾಡಿಸುವವರು ಯಾರು. ಶನಿವಾರ, ಭಾನುವಾರ ಹೆರಿಗೆ ಬಂದ ಮಹಿಳೆಯರ ಕಥೆ ಹೇಳತೀರದು. ಈ ಎಲ್ಲಾ ವಿಷಯವು ಡೀನ್ ಮತ್ತು ಡಿಎಚ್‍ಓ ಅವರಿಗೆ ಗೊತ್ತೀಲ್ಲವೇ. ಈ ಕೂಡಲೇ ಹೆರಿಗೆ ಅಸ್ಪತ್ರೆ ಅವ್ಯವಸ್ಥೆಯನ್ನು ಸುಧಾರಿಸಬೇಕು. ತಜ್ಞ ವೈದ್ಯರ ನೇಮಕವಾಗಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಬಸವರಾಜು ಈ ಸಂಬಂಧ ತಕ್ಷಣವೇ ಸಂಬಂಧಪಟ್ಟ ಡೀನ್ ಮತ್ತು ಡಿಎಚ್‍ಓಗೆ ಪತ್ರ ಬರೆಯುವುದಾಗಿ ತಿಳಿಸಿದರು.
ಮುತ್ತಿಗೆ ಗ್ರಾಮದ ಸರ್ವೆ ನಂ 239ರಲ್ಲಿ ಬಿಳಿಕಲ್ಲು ಗಣಿಗಾರಿಕೆ ಅಕ್ರಮವಾಗಿ ನಡೆಯುತ್ತಿದೆ. ಯಾವುದೇ ಪರವಾನಗಿ ಇಲ್ಲ. ರಾತ್ರೋರಾತ್ರಿ ಕಲ್ಲು ಸಾಗಾಣಿಕೆ ನಡೆಯುತ್ತಿದೆ. ಅಧಿಕಾರಿಗಳು ಕಣ್ಮುಂಚಿ ಕುಳಿತ್ತಿದ್ದಾರೆ. ಜೋಡಿ ರಸ್ತೆಯ ಭುವನೇಶ್ವರಿ ವೃತ್ತದಲ್ಲಿ ರಸ್ತೆ ಕಾಮಗಾರಿಯಾಗುವ ಸಂದರ್ಭದಲ್ಲಿ ನಗರಸಭೆ ಅವರು ಬಿ.ರಾಚಯ್ಯ ಜೋಡಿ ರಸ್ತೆ ಕಮಾನು ತೆಗೆದಿದ್ದರು. ಆದರೆ,ಇ ನ್ನು ಸಹ ಸ್ವಾಗತ ಕಮಾನು ಆಳವಡಿಸಿಲ್ಲ ಎಂದರು.
ದೇವಲಪುರ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಮಾಡಿ, ಕೊತ್ತಲವಾಡಿ ಗ್ರಾಮಪಂಚಾಯಿತಿಗೆ ದೇವಲಪುರ ಗ್ರಾಮವನ್ನು ಕಂದಾಯ ಗ್ರಾಮಕ್ಕೆ ಸೇರ್ಪಡೆ ಮಾಡಲು ಪಂಚಾಯಿತಿ ನಿರ್ಣಯ ಕಳುಹಿಸಿಕೊಡುವಂತೆ ಸೂಚನೆ ನೀಡಿದರು.
ಸಭೆ ಆರಂಭವಾಗುತ್ತಿದ್ದಂತೆ ಇತ್ತೀಚೆಗೆ ನಿಧನರಾದ ಮಾಜಿ ಸಂಸದ ಆರ್. ಧ್ರುವನಾರಾಯಣ್ ಅವgರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಸಭೆಯಲ್ಲಿ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಚಿಕ್ಕಬಸವಯ್ಯ, ಡಿವೈಎಸ್ಪಿ ಪ್ರಿಯಾದರ್ಶಿನಿ ಸಾಣೆಗೊಪ್ಪಾ, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗೆ ಸುಬ್ಬರಾಯ, ದಲಿತ ಮುಖಂಡರಾದ ಸಿ.ಎಂ.ಶಿವಣ್ಣ, ಬ್ಯಾಡಮೂಡ್ಲು ಬಸವಣ್ಣ, ರಾಮಸಮುದ್ರ ನಾಗರಾಜು, ದಡದಹಳ್ಳಿ ಶಂಕರ್, ಹಾಗು ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.