ಸರ್ಕಾರಿ ಹಾಲಿನ ಡೈರಿಗಳಲ್ಲಿ ಸಿಸಿ ಟಿವಿ ಅಳವಡಿಸಲು ಸೂಚನೆ

ಕುಣಿಗಲ್, ಜು. ೧೮- ತಾಲ್ಲೂಕಿನ ಸರ್ಕಾರಿ ಹಾಲಿನ ಡೈರಿಗಳಲ್ಲಿ ರೈತರಿಗೆ ಎಲ್ಲ ಹಂತಗಳಲ್ಲಿಯೂ ಮೋಸ ನಡೆಯುತ್ತಿದೆ. ಆದ್ದರಿಂದ ಸರ್ಕಾರಿ ಹಾಲಿನ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸುವಂತೆ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಚಂದ್ರಶೇಖರ್ ಅವರಿಗೆ ಶಾಸಕ ಡಾ.ರಂಗನಾಥ್ ತಾಕೀತು ಮಾಡಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರು, ತಾಲ್ಲೂಕಿನಲ್ಲಿ ಸರ್ಕಾರ ಡೈರಿಗಳನ್ನು ತೆರೆದಿರುವುದು ಬಡ ರೈತರ ಉಪಯೋಗಕ್ಕೆ ಅದನ್ನು ಬಿಟ್ಟು ಅದನ್ನು ನಡೆಸುವವರೇ ಹಣಗಳಿಕೆಯಲ್ಲಿ ಮುಂದಾಗಿದ್ದಾರೆ. ತಾಲ್ಲೂಕಿನ ೧೪೫ ಸರ್ಕಾರಿ ಹಾಲಿನ ಡೈರಿಗಳಲ್ಲಿ ಹಾಲು ಹಾಕುವಂತಹ ಪ್ರತಿ ರೈತರಿಗೆ ವರ್ಷಕ್ಕೆ ೨೫ ಸಾವಿರ ರೂ. ಗಳಂತೆ ನಷ್ಟವಾಗುತ್ತಿದೆ. ಇದನ್ನು ಲೆಕ್ಕ ಹಾಕಿದರೆ ಡೈರಿಗಳಿಗೆ ಹಾಲು ಹಾಕುವಂತಹ ತಾಲ್ಲೂಕಿನ ಸಾವಿರಾರು ರೈತರಿಗೆ ಸುಮಾರು ವರ್ಷಕ್ಕೆ ೪ ಕೋಟಿ ರೂ. ಗಳ ಅನ್ಯಾಯವಾಗುತ್ತಿದೆ. ಇದನ್ನು ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ. ಈ ಸಂಬಂಧ ಸಂಬಂಧಪಟ್ಟ ಸಚಿವರಲ್ಲಿ ಮಾತನಾಡುತ್ತೇನೆ. ತಾಲ್ಲೂಕಿನ ಸರ್ಕಾರಿ ಹಾಲಿನ ಕೇಂದ್ರಗಳಲ್ಲಿ ಸಿಸಿ ಟಿವಿ ಅಳವಡಿಸಿ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಬೇಕೆಂದು ಸಭೆಯಲ್ಲಿದ್ದ ಸಿಡಿಒ ಹಾಗೂ ಎಆರ್‌ಸಿಎಸ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಹಾಲಿನ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸುವುದರಿಂದ ಆಗುವಂತಹ ಅನ್ಯಾಯ ತಪ್ಪಿಸಬಹುದು ಎಂದ ಅವರು, ಹಾಲಿನ ಕೇಂದ್ರಗಳಿಗೆ ಹಾಲನ್ನು ಹಾಕುವ ರೈತರಿಗೆ ಅನ್ಯಾಯ ಮಾಡಿದರೆ ಅದರ ಪ್ರತಿಫಲವನ್ನು ಅನುಭವಿಸಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ಸರ್ಕಾರಿ ಹಾಲಿನ ಕೇಂದ್ರಗಳಿಗೆ ಚುನಾವಣೆ ನಡೆಯುವ ಮುಂದಿನ ೪೫ ದಿನಗಳ ಮುಂಚೆ ಸಿಡಿಒ ರವರು ಹಾಲಿನ ಕೇಂದ್ರಗಳಲ್ಲಿ ಹಾಗೂ ತಮ್ಮ ಕಚೇರಿಯ ನೋಟಿಸ್ ಬೋರ್ಡ್‌ಗಳಲ್ಲಿ ಪ್ರಚಾರ ನೀಡಬೇಕೆಂದು ತಾಕೀತು ಮಾಡಿದರು.
ಸಭೆಯಲ್ಲಿ ಅತಿ ಹೆಚ್ಚಾಗಿ ಸರ್ಕಾರಿ ಹಾಲಿನ ಕೇಂದ್ರಗಳ ಬಗ್ಗೆ ಗಂಭೀರವಾದ ಚರ್ಚೆ ನಡೆಯಿತು. ನಂತರ ಜಲ ಜೀವನ್, ಮಹಾತ್ಮಗಾಂಧಿ ನರೇಗಾ ಯೋಜನೆ ಅನುಷ್ಠಾನ, ಸಿಸಿ ರಸ್ತೆ ನಿರ್ಮಾಣ, ಅಂಗನವಾಡಿ ಕಟ್ಟಡಗಳ ನಿರ್ಮಾಣ, ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡುವುದು ಸೇರಿದಂತೆ ಸಂಬಂಧಪಟ್ಟ ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಹಾಗೂ ತುಮಕೂರು ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಅತೀಕ್ ಪಾಷಾ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜೋಸೆಫ್, ಹಾಗೂ ಪಿಡಿಒ ಇತರೆ ಅಧಿಕಾರಿಗಳೊಂದಿಗೆ ಹಲವಾರು ಗಂಭೀರ ಚರ್ಚೆ ನಡೆಸಿ ಕೆಲವು ಸೂಕ್ತವಾದ ಸಲಹೆ ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಿದರು.
ಅಲ್ಲದೆ ಪಿಡಿಒ ಸೇರಿದಂತೆ ಪ್ರತಿಯೊಂದು ಇಲಾಖೆಗಳ ಅಧಿಕಾರಿಗಳು ಜನರಲ್ಲಿ ಕೊರೊನಾ ಹರಡದಂತೆ ತಡೆಯುವ ಉದ್ದೇಶದಿಂದ ನೂತನ ಟಿಎಚ್‌ಒ ರವರಿಗೆ ಕೊರೊನಾ ಲಸಿಕೆ ಬೂಸ್ಟರ್ ಡೋಸ್ ಹಾಕುವ ಸಂಬಂಧ ಸಂಪೂರ್ಣ ಸಹಕಾರ ನೀಡುವಂತೆ ಶಾಸಕರು ಕಟ್ಟುನಿಟ್ಟಾಗಿ ಸೂಚಿಸಿದರು.
ಸಭೆಯಲ್ಲಿ ತಹಶೀಲ್ದಾರ್ ಮಹಾಬಲೇಶ್, ತಾಲ್ಲೂಕು ಮಟ್ಟದ ಸರ್ಕಾರಿ ಇಲಾಖಾಧಿಕಾರಿಗಳು, ಪಿಡಿಒಗಳು, ನರೇಗಾ ಎಂಜಿನಿಯರ್‌ಗಳು ಉಪಸ್ಥಿತರಿದ್ದರು.