ಸರ್ಕಾರಿ ಸ್ವತಂತ್ರ ಪ.ಪೂ.ಕಾಲೇಜಿನಲ್ಲಿ ವನಮಹೋತ್ಸವ ಆಚರಣೆ

ಕಲಬುರಗಿ,ಜೂ.6-ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಅರಣ್ಯ ಇಲಾಖೆ ಸಾಮಾಜಿಕ ವಲಯ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು “ನಮ್ಮ ಭೂಮಿ ನಮ್ಮ ಭವಿಷ್ಯ” ಎನ್ನುವ ಧ್ಯೇಯದೊಂದಿಗೆ ನಗರದ ಸ್ಟೇಷನ್ ಬಜಾರ್ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ವನಮಹೋತ್ಸವವನ್ನು ಆಚರಿಸಲಾಯಿತು.
ವನಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಾಂಶುಪಾಲರಾದ ಸುಜಾತಾ ಬಿರಾದರ್ ಅವರು, ಪ್ರತಿಯೊಬ್ಬರು ಪರಿಸರದ ಕಾಳಜಿಯನ್ನು ಇಟ್ಟುಕೊಂಡು ಸಸಿಗಳನ್ನು ನೆಟ್ಟು ಪರಿಸರ ಸಮತೋಲನ ಕಾಪಾಡಬೇಕು. ನಿರಂತರವಾಗಿ ಗಿಡಗಳನ್ನು ನೆಟ್ಟು ಮುಂದಿನ ಭವಿಷ್ಯದ ಪೀಳಿಗೆಯನ್ನು ಸಂರಕ್ಷಿಸುವ ಕೆಲಸ ಮಾಡಬೇಕು ಎಂದರು.
ಎನ್‍ಎಸ್‍ಎಸ್ ವಿಭಾಗೀಯ ಅಧಿಕಾರಿ ಡಾ.ಚಂದ್ರಶೇಖರ್ ದೊಡ್ಡಮನಿ ಮಾತನಾಡಿ, ಸಸ್ಯ ಸುಂಕುಲ ಅಪಾರವಾದ ಔಷಧಿಯ ಗುಣಗಳನ್ನು ಹೊಂದಿದ್ದು ಮಾರಕ ಕಾಯಿಲೆಗಳನ್ನು ವಾಸಿ ಮಾಡುವ ಗುಣ ಹೊಂದಿದೆ. ಹೆಚ್ಚೆಚ್ಚು ಗಿಡಗಳನ್ನು ನೆಟ್ಟು ಈಗಾಗಲೇ ಪರಿಸರ ಅಸಮತೋಲನ ಉಂಟಾಗಿದ್ದು ಅದನ್ನು ತಪ್ಪಿಸಿ ಪರಿಸರ ಸಮತೋಲನ ಕಾಪಾಡಲು ಪ್ರತಿಯೊಬ್ಬರು ಕೈ ಜೋಡಿಸಬೇಕು. ಸಾಮಾಜಿಕ ಅರಣ್ಯ ವಲಯದ ಉಪ ವಲಯ ಅರಣ್ಯ ಅಧಿಕಾರಿ ಸಂಗಮೇಶ್ ಪಾಟೀಲ್ ಮಾತನಾಡಿ, ಈ ಭೂಮಂಡಲದಲ್ಲಿ ಪ್ರಾಣಿ ಪಕ್ಷಿ ಮನುಷ್ಯರಿಗೆ ಹೇಗೆ ಬದುಕುವ ಹಕ್ಕು ಇದೆಯೋ ಹಾಗೆಯೇ ಸಸ್ಯಗಳಿಗೂ ಬದುಕುವ ಹಕ್ಕಿದೆ. ನಮಗೆ ಹೇಗೆ ಜೀವ ಇದೆಯೋ ಗಿಡ ಮರಗಳಿಗೂ ಜೀವವಿದೆ. ಕೇವಲ ಅರಣ್ಯ ಇಲಾಖೆ ಗಿಡಗಳನ್ನು ನೆಡಬೇಕೆಂಬ ಮನೋಭಾವ ಸಮಾಜ ಬಿಡಬೇಕು. ಸಸಿಗಳನ್ನು ನೆಡುವ ಕರ್ತವ್ಯ ಪ್ರತಿಯೊಬ್ಬರದು ಆಗಬೇಕು ಎಂದರು.
ಎನ್‍ಎಸ್‍ಎಸ್ ಜಿಲ್ಲಾ ನೋಡಲ್ ಅಧಿಕಾರಿ ಎನ್.ಆರ್. ಕುಲಕರ್ಣಿ ಕಾರ್ಯಕ್ರಮದ ನೇತೃತ್ವವಹಿಸಿದ್ದರು. ಎನ್‍ಎಸ್‍ಎಸ್ ಅಧಿಕಾರಿ ಪಾಂಡು ಎಲ್. ರಾಠೋಡ್ ವಹಿಸಿದ್ದರು. ವನಮಹೋತ್ಸವದಲ್ಲಿ ಹಿರಿಯ ಉಪನ್ಯಾಸಕ ಚಂದ್ರಕಾಂತ ಸನದಿ, ಮಲ್ಲಯ್ಯ ಮಠಪತಿ, ಬಲರಾಮ್ ಚವ್ಹಾಣ್, ಮಾಪಣ್ಣ ಜಿರೋಳಿ, ಸಿದ್ದಲಿಂಗಪ್ಪ ಪೂಜಾರಿ, ಶಿವಪ್ಪ ಎಚ್. ಶ್ರೀಶೈಲ, ಶಶಿಧರ್ ಭೂಸನೂರ್, ದಯಾನಂದ್ ಹೊನ್ನಶೆಟ್ಟಿ, ರಾಜೇಶ್ ಕೆಜೆ, ಎನ್‍ಎಸ್ ಎಸ್ ಸ್ವಯಂಸೇವಕರು ಉಪಸ್ಥಿತರಿದ್ದರು.