ಸರ್ಕಾರಿ ಸೌಮ್ಯಗಳ ಮಾರಾಟದ ವಿರುದ್ಧ ಹೋರಾಟ ಅನಿವಾರ್ಯ – ಅಮಾನುಲ್ಲಾ

ರಾಯಚೂರು, ನ.೨೮- ಕೇಂದ್ರ ಸರ್ಕಾರ ಸರ್ಕಾರಿ ಸೌಮ್ಯದ ಕಂಪನಿಗಳ ಖಾಸಗೀಕರಣ ಮಾಡಿ ಉದ್ಯಮಿಗಳಿಗೆ ಲಾಭ ಮಾಡಿಕೊಡುವ ಮೂಲಕ ದೇಶದ ಆಸ್ತಿಯನ್ನು ಲೂಟಿ ಮಾಡುತ್ತಿದ್ದು ಇದನ್ನು ತಡೆಗಟ್ಟದಿದ್ದಲ್ಲಿ ಯಾವುದೇ ಸರ್ಕಾರಿ ಸೌಮ್ಯದ ಸಂಸ್ಥೆ ಉಳಿಯದೇ ಉದ್ಯಮಿಗಳ ಪಾಲಾಗುವುದು ಖಚಿತ ಸಂಘಟನಾತ್ಮಕ ಹೋರಾಟ ಅಗತ್ಯವಾಗಿದೆ ಎಂದು ಅಖಿಲ ಭಾರತ ವಿಮಾ ನೌಕರರ ಸಂಘದ ಮಾಜಿ ಅಧ್ಯಕ್ಷ ಅಮಾನುಲ್ಲಾ ಖಾನ್ ಸಲಹೆ ನೀಡಿದರು.
ವಿಮಾ ನೌಕರರ ಒಕ್ಕೂಟ ಜಿಲ್ಲಾ ಘಟಕದ ವತಿಯಿಂದ ನಗರದ ಎಲ್‌ಐಸಿ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಆಸ್ತಿ ಹಣಗಳಿಕೆ ಮತ್ತು ಸರ್ಕಾರಿ ಸೌಮ್ಯದ ಕಂಪನಿಗಳ ಖಾಸಗೀಕರಣ ವಿಷಯದ ಕುರಿತು ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಉಪನ್ಯಾಸ ನೀಡಿದ ಅವರು, ಸರ್ಕಾರ ಬಿಎಸ್‌ಎನ್‌ಎಲ್, ಎಲ್‌ಐಸಿ, ಏರ್ ಇಂಡಿಯಾ, ರೈಲ್ವೆ ಸೇರಿ ಇತರೆ ಸರ್ಕಾರಿ ಸೌಮ್ಯದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಲು ಮುಂದಾಗುತ್ತಿದ್ದು ಖಂಡನೀಯ. ಯುಪಿಯ ಅಧಿಕಾರದಲ್ಲಿದ್ದಾಗ ಖಾಸಗೀಕರಣಕ್ಕೆ ವಿರೋಧಿಸಿದ ಬಿಜೆಪಿ ಈಗ ಎಲ್ಲಾ ಕ್ಷೇತ್ರಗಳನ್ನು ಖಾಸಗಿ ಉದ್ಯಮಿಗಳ ಪಾಲಿಗೆ ನೀಡುತ್ತಿದೆ. ದೇಶದ ಜನರಿಗೆ ಈ ಸಂಸ್ಥೆಗಳ ಮೂಲಕ ಸೇವೆ ನೀಡಬೇಕಿದೆ ಆದರೆ ಸರ್ಕಾರ ಲಾಭದಾಯಕವಾಗಿಲ್ಲ ಎಂದು ನೆಪ ಹೇಳಿ ಖಾಸಗೀಕರಣ, ಉದ್ಯಮಿಗಳಿಗೆ ಮಾರಾಟ ಮಾಡುತ್ತಿದೆ ಎಂದು ದೂರಿದರು.
ಸರ್ಕಾರ ರೈತ, ಕಾರ್ಮಿಕ, ಜನವಿರೋಧಿ ನೀತಿ ಅನುಸರಿಸುತ್ತಿದೆ. ಬ್ಯಾಂಕುಗಳ ವಿಲೀನಕರಣಗೊಳಿಸಿ ಬ್ಯಾಂಕುಗಳ ಸ್ಥಾಪನೆಯ ಉದ್ದೇಶ ತಲೆ ಕೆಳಗಾಗುವಂತೆ ಮಾಡಿದೆ. ನೀರು, ಗಾಳಿ ಇತರೆ ನೈಸರ್ಗಿಕ ಸಂಪನ್ಮೂಲ ಸರ್ವಾಜನಿಕ ಆಸ್ತಿ ಇದರ ಮೇಲೆ ನಾಗರಿಕರ ಹಕ್ಕಿದೆ ಎಂದು ಸಂವಿಧಾನ ಹೇಳಿದರೆ ಸರ್ಕಾರದ ನೀತಿಯಿಂದಾಗಿ ಇವುಗಳ ಮೇಲೆ ಉದ್ಯಮಿಗಳ ವ್ಯಾಪಾರ ವಸ್ತುವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಹಿಂದಿ ಚಿತ್ರ ನಟಿ ಕಂಗನಾ ರನೌತ್ ಸ್ವಾತಂತ್ರ್ಯ ನಮಗೆ ಭಿಕ್ಷೆಯಾಗಿ ಸಿಕ್ಕಿದೆ ಎಂದು ಹೇಳಿದರೂ ಯಾವುದೇ ಕ್ರಮ ಕೈಗೊಂಡಿಲ್ಲ, ಪ್ರಧಾನಿ ಮೋದಿ ಹಾಗೂ ಆಡಳಿತದ ವಿರುದ್ಧ ಮಾತನಾಡಿದವರಿಗೆ ದೇಶದ್ರೋಹಿ ಪ್ರಕರಣ ದಾಖಲಿಸಲಾಗುತ್ತಿದೆ.
ಚುನಾವಣೆಯ ಸಂದರ್ಭದಲ್ಲಿ ಬಡತನ, ನಿರುದ್ಯೋಗ, ಆರ್ಥಿಕ ಸಮಸ್ಯೆ, ಬೆಲೆ ಏರಿಕೆಯ ಬಗ್ಗೆ ಚರ್ಚೆ ನಡೆಯದೇ ಹಿಂದು?ಮುಸ್ಲಿಂ, ಚಿತ್ರನಟರ ಬಗ್ಗೆ ಚರ್ಚೆ ನಡೆಯುತ್ತಿದೆ. ಸರ್ಕಾರದ ಆಡಳಿತದ ಬಗ್ಗೆ ಪ್ರಶ್ನೆ ಮಾಡದಿದ್ದಲ್ಲಿ ಭಾರಿ ಬೆಲೆ ತೆರೆಬೇಕಾಗುತ್ತದೆ. ನೌಕರರ ಸಂಘದಿಂದ ಸಹಿ ಸಂಗ್ರಹ, ಧರಣಿ ಸತ್ಯಗ್ರಹ ಸೇರಿ ವಿವಿಧ ಹೋರಾಟ ಮಾಡಲಾಗುವುದು ಎಲ್ಲರೂ ಹೋರಾಟಕ್ಕೆ ಕೈಜೋಡಿಸಬೇಕು. ಕೃಷಿ ತಿದ್ದುಪಡಿ ಕಾಯ್ದೆ ವಿರುದ್ಧ ರೈತರು ಒಗ್ಗಟ್ಟು ಪ್ರದರ್ಶನ ಮಾಡಿದ್ದರಿಂದ ಪ್ರಧಾನಿ ಮೋದಿ ಅವರು ಕಾಯ್ದೆ ವಾಪಸ್ ಪಡೆದಿದ್ದು ಹೋರಾಟಕ್ಕೆ ಜಯ ಸಿಕ್ಕಿದೆ. ಇದು ಅನೇಕ ಹೋರಾಟಕ್ಕೆ ಮಾದರಿಯಾಗಿದೆ. ಇದು ಐತಿಹಾಸಿಕ ಜಯವಾಗಿದೆ ಎಂದರು.
ವಿಮಾ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಎಂ.ರವಿ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಸಾರ್ವಜನಿಕ ಸಂಸ್ಥೆಗಳು ದೇಶದ ಪ್ರಜೆಗಳ ಆಸ್ತಿ. ಆದರೆ ಸರ್ಕಾರ ಸಾರ್ವಜನಿಕ ಸರ್ಕಾರ ಖಾಸಗೀಕರಣ ಹಾಗೂ ಉದ್ಯಮಿಗಳಿಗೆ ಮಾರಾಟ ಮಾಡುವ ಮೂಲಕ ಜನರಿಗೆ ದ್ರೋಹ ಮಾಡುತ್ತಿದೆ. ಸರ್ಕಾರಕ್ಕೆ ಸೇವೆಗಿಂತ ಲಾಭವೇ ಮುಖ್ಯವಾಗಿದೆ. ಹೀಗೆ ಮುಂದುವರೆದರೆ ದೇಶ ದಿವಾಳಿಯಾಗುವುದು ಖಚಿತ ಎಂದು ಹೇಳಿದರು.