ಕಲಬುರಗಿ: ಜೂ.10:ಸರ್ಕಾರಿ ನೌಕರಿ ಪಡೆಯುವುದು, ದೀರ್ಘಕಾಲ ನೌಕರಿ ಮಾಡುವುದು. ಪ್ರಶಸ್ತಿ-ಪುರಸ್ಕಾರ ಪಡೆಯುವುದು ಮುಖ್ಯವಲ್ಲ. ಬದಲಿಗೆ ದೊರೆತ ಹುದ್ದೆಗೆ ಪ್ರಾಮಾಣಿಕತೆ, ನಿಷ್ಠೆ ಹಾಗೂ ಕರ್ತವ್ಯಬದ್ಧತೆಯಿಂದ ಸೇವೆ ಸಲ್ಲಿಸುವುದು ಅಗತ್ಯ. ಅಂತಹ ಸೇವೆ ನೌಕರನಿಗೆ ನಿಜಕ್ಕೂ ಸಾರ್ಥಕ, ಇಲಾಖೆ ಮತ್ತು ಸಮಾಜಕ್ಕೆ ಗೌರವ ದೊರೆಯಲು ಸಾಧ್ಯವಾಗುತ್ತದೆ. ಸಮಾಜಮುಖಿ ಸೇವೆ ಸರ್ಕಾರಿ ನೌಕರರದಾಗಬೇಕಾಗಿದೆ ಎಂದು ಜೇವರ್ಗಿಯ ಬಾಲಕರ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಹೇಶಕುಮಾರ ಚಿಂಚೋಳಿ ಮಾರ್ಮಿಕವಾಗಿ ಅಭಿಪ್ರಾಯಪಟ್ಟರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಕನ್ಯಾ ಪ್ರೌಢಶಾಲೆಯಲ್ಲಿ ವಿಜ್ಞಾನ ವಿಷಯದ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಕಳೆದ 31ರಂದು ವಯೋನಿವೃತ್ತಿ ಹೊಂದಿರುವ ಉಮಾದೇವಿ ಬಿ.ಗೌಡ್ ಅವರಿಗೆ ಶಾಲೆಯ ವತಿಯಿಂದ ಶುಕ್ರವಾರ ಏರ್ಪಡಿಸಲಾಗಿದ್ದ ವಯೋನಿವೃತ್ತಿ ಬೀಳ್ಕೊಡುಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಕನ್ಯಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ದೇವಿಂದ್ರಪ್ಪ ಮಾತನಾಡಿ, ಉಮಾದೇವಿ ಬಿ.ಗೌಡ್ ಅವರು ನಮ್ಮ ಶಾಲೆಯಲ್ಲಿ ವಿಜ್ಞಾನ ವಿಷಯದ ಶಿಕ್ಷಕಿಯಾಗಿ ಉತ್ತಮವಾಗಿ ಸೇವೆ ಸಲ್ಲಿಸಿದ್ದಾರೆ. ವಿಜ್ಞಾನ ವಿಷಯವನ್ನು ವಿದ್ಯಾರ್ಥಿನಿಯರಿಗೆ ಮನಮುಟ್ಟುವಂತೆ ಬೋಧನಾ ಕಾರ್ಯ ಮಾಡಿದ್ದಾರೆ. ಬಹಳ ಸರಳ, ಶಾಂತವಾಗಿರುವ ಅಪರೂಪದ ವ್ಯಕ್ತಿಯಾಗಿದ್ದಾರೆ. ಮಕ್ಕಳೊಂದಿಗೆ ಬೆರೆತು, ಅವರ ಮಟ್ಟಕ್ಕಿಳಿದು ಬೋಧಿಸುತ್ತಿದ್ದ ಶೈಲಿ ಉತ್ತಮವಾಗಿತ್ತು. ಮೇರು ವ್ಯಕ್ತಿತ್ವ ಹೊಂದಿದ್ದ ಅವರು, ಶಾಲೆಗೆ ನೀಡಿರುವ ಸೇವೆ ಸ್ಮರಣೀಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸ್ಥಳೀಯ ಬಾಲಕರ ಸರ್ಕಾರಿ ಬಾಲಕರ ಪ್ರೌಢಶಾಲೆ, ಸ್ಥಳೀಯ ಸರ್ಕಾರಿ ಪದವಿ ಪೂರ್ವ ಪಿಯು ಕಾಲೇಜು ಇವುಗಳ ವತಿಯಿಂದ ಸತ್ಕರಿಸಿ, ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಬಸವಂತಗೌಡ, ಚಿನ್ಮಯ ಬಿ.ಗೌಡ್, ಕಾಲೇಜಿನ ಉಪನ್ಯಾಸಕರಾದ ರವೀಂದ್ರಕುಮಾರ ಬಟಗೇರಿ, ಶರಣಮ್ಮ ಭಾವಿಕಟ್ಟಿ, ನಯಿಮಾ ನಾಹಿದ್, ಶಂಕ್ರೆಪ್ಪ ಹೊಸದೊಡ್ಡಿ, ಎಚ್.ಬಿ.ಪಾಟೀಲ, ರೇಣುಕಾ ಚಿಕ್ಕಮೇಟಿ, ಪ್ರ.ದ.ಸ. ನೇಸರ ಎಂ.ಬೀಳಗಿಮಠ, ಕನ್ಯಾ ಪ್ರೌಢಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಸಂಗನಗೌಡ್ ಪಾಟೀಲ, ಶಿಕ್ಷಕರಾದ ಇಸ್ಮೈಲ್ ಬಡದಾಳ, ಶಿವಯೋಗಿ,ವಿ.ಜಿ.ಹಿರೇಮಠ, ಶಿವಾನಂದ, ಪ್ರತಿಮಾ, ಜಯಶ್ರೀ ಕುಲಕರ್ಣಿ, ಹಣಮಂತ ಚಂದುರೆ, ಬಾಲಕರ ಪ್ರೌಢಶಾಲಾ ಶಿಕ್ಷಕರಾದ ರಮೇಶ ಖಾನಾಪುರೆ, ಸೋಮಣಗೌಡ ಪಾಟೀಲ, ದಯಾನಂದ ಹಿರೇಮಠ, ಈರ್ಫಾನ್ ಬೇಗಂ, ತನುಜಾ, ಅನೀಲಕುಮಾರ ಶರಾಫ್, ಶಾಂತಾಬಾಯಿ, ಅಲ್ಲಾಭಕ್ಷ, ಮಂಗಲಾ ಹಾಗೂ ವಿದ್ಯಾರ್ಥಿಗಳು, ಮತ್ತಿತರರು ಭಾಗವಹಿಸಿದ್ದರು.