ಸರ್ಕಾರಿ ಸಭೆ, ಸಮಾರಂಭಗಳಲ್ಲಿ ಶಿಷ್ಟಾಚಾರ ಪಾಲನೆಯಾಗಲಿ: ರಾಮಚಂದ್ರನ್ ಆರ್

ಬೀದರ ನ.20: ಸರ್ಕಾರಿ ಸಭೆ ಮತ್ತು ಸಮಾರಂಭಗಳ ಆಯೋಜನೆಯಲ್ಲಿ ಶಿಷ್ಟಾಚಾರಗಳನ್ನು ಚಾಚುತಪ್ಪದೇ ಪಾಲಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ವಿಡಿಯೋ ಸಂವಾದ ಸಭಾಂಗಣದಲ್ಲಿ ನವೆಂಬರ್ 18ರಂದು ಸಂಜೆ ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳೊಂದಿಗೆ ವಿಡಿಯ ಸಂವಾದ ನಡೆಸಿ ಅವರು ಮಾತನಾಡಿದರು.
ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಒಳಗೊಂಡಂತೆ ಸರ್ಕಾರದ ಆಯಾ ಇಲಾಖೆಯ ಅಧಿಕೃತ ಕಾರ್ಯಕ್ರಮಗಳಿಗೆ ಸಂಬಂಧಪಟ್ಟ ಇಲಾಖೆಯ ಸಚಿವರ ಸಮಾಲೋಚನೆಯೊಂದಿಗೆ ನಿಗದಿಪಡಿಸಿ ಕಾರ್ಯಕ್ರಮವನ್ನು ಏರ್ಪಡಿಸಬೇಕು. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಬದಲಾಗಿ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರೇ ಆಹ್ವಾನ ಪತ್ರಿಕೆಗಳನ್ನು ಮುದ್ರಿಸಿ ಸರ್ಕಾರಿ ಸಮಾರಂಭಗಳನ್ನು ಏರ್ಪಡಿಸಬಾರದು. ಯಾವುದೇ ಸರ್ಕಾರಿ ಸಭೆ ಅಥವಾ ಕಾರ್ಯಕ್ರಮವನ್ನು ಖಾಸಗಿ ನಿವಾಸದಲ್ಲಿ ಏರ್ಪಡಿಸುವಂತಿಲ್ಲ.
ಸರ್ಕಾರದ ಯಾವುದೇ ಕಾರ್ಯಕ್ರಮವಾಗಿದ್ದರೂ ಸಾಮಾನ್ಯವಾಗಿ ಕಾರ್ಯಕ್ರಮ ನಡೆಯುವ ಸ್ಥಳದ ವ್ಯಾಪ್ತಿಗೊಳಪಡುವ ವಿಧಾನಸಭಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿಯೇ ಕಾರ್ಯಕ್ರಮ ನಡೆಸಬೇಕು. ಆದರೆ, ಕೆಲವೊಂದು ಸಂದರ್ಭದಲ್ಲಿ ಒಂದು ವಿಧಾನಸಭಾ ಕ್ಷೇತ್ರದ ಸ್ಥಳೀಯ ಕಾರ್ಯಕ್ರಮವನ್ನು ಸದರಿ ವಿಧಾನಸಭಾ ಕ್ಷೇತ್ರದ ಹೋಬಳಿ ಪ್ರದೇಶವಿರುವ ತಾಲೂಕಿನ ಕೇಂದ್ರ ಸ್ಥಾನದಲ್ಲಿ ಆಯೋಜಿಸಿದಾಗ ಸದರಿ ತಾಲೂಕು ಕೇಂದ್ರ ಸ್ಥಾನವು ಇನ್ನೊಂದು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದರೂ ಸಹ ಅಂತಹ ಕಾರ್ಯಕ್ರಮಗಳಲ್ಲಿ ಕಾರ್ಯಕ್ರಮವು ಯಾವ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಿರುತ್ತದೆಯೋ ಆ ಸಂಬಂಧಪಟ್ಟ ಶಾಸಕರು ಅಧ್ಯಕ್ಷತೆ ವಹಿಸಬೇಕು ಎನ್ನುವ ಶಿಷ್ಟಾಚಾರ ಕುರಿತ ಸೂಚನೆಗಳನ್ನು ಅಧಿಕಾರಿಗಳು ತಪ್ಪದೇ ಪಾಲನೆ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಪಂ ಸಿಇಓ ಗ್ಯಾನೇಂದ್ರಕುಮಾರ ಗಂಗವಾರ ಅವರು ಮಾತನಾಡಿ, ಶಿಷ್ಠಾಚಾರದ ಬಗ್ಗೆ ಏನೇ ಗೊಂದಲವಿದ್ದರೂ ಆ ಬಗ್ಗೆ ಅಧಿಕಾರಿಗಳು ಕೇಳಿ ತಿಳಿದುಕೊಳ್ಳಬೇಕು. ಶಿಷ್ಠಾಚಾರ ಲೋಪವಾದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆಯಾಗಿಸಿ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್., ಅಪರ ಜಿಲ್ಲಾಧಿಕಾರಿಗಳಾದ ರುದ್ರೇಶ ಗಾಳಿ, ಬೀದರ ಹಾಗೂ ಬಸವಕಲ್ಯಾಣ ಸಹಾಯಕ ಆಯುಕ್ತರಾದ ಗರೀಮಾ ಪನವಾರ, ಭುವನೇಶ ಪಟೇಲ್, ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ಇದ್ದರು.