“ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಂದ ದಾಖಲಾತಿ ಅಂದೋಲನ ಜಾಥಾ”


ಸಂಜೆವಾಣಿ ವಾರ್ತೆ
ಸಿರಿಗೇರಿ ಜೂ.19. ಗ್ರಾಮದಲ್ಲಿ ಜೂ.17 ರಂದು ಶನಿವಾರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಂದ ದಾಖಲಾತಿ ಆಂದೋಲನ ಜಾಥಾ ನಡೆಸಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳು ಜಾಥಾ ಹೊರಟು 6ವರ್ಷದ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಎಂದು ಕೂಗಿ ಹೇಳುತ್ತಾ ಪೋಷಕರಲ್ಲಿ ಜಾಗೃತಿ ಮೂಡಿಸಿದರು. ಜಾಥಾ ಕೊನೆಯಲ್ಲಿ ಗ್ರಾಮದ ಮುಖ್ಯವೃತ್ತದಲ್ಲಿ ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ ಕೆಲಹೊತ್ತು ಘೋಷಣೆ ಕೂಗುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಇದೇವೇಳೆ ಶಾಲೆಯ ಮುಖ್ಯಗುರು ಸತೀಶ್‍ಕುಮಾರ್ ಮಾಹಿತಿ ನೀಡಿ ಪೋಷಕರು ತಮ್ಮ ಮಕ್ಕಳಿಗೆ 6ವರ್ಷ ತುಂಬಿದ ನಂತರ ಅವರಿಗೆ ಸಕಾದಲ್ಲಿಶಕ್ಷಣ ಕೊಡಿಸುವುದು ಕಡ್ಡಾಯ, ಶಿಕ್ಷಣ ಇಲಾಖೆಯಿಂದ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ 1ನೇ ತರಗತಿಯಿಂದಲೇ ಬಿಸಿಯೂಟ, ಪಠ್ಯಪುಸ್ತಕ, ಸಮವಸ್ತ್ರಗಳ ವಿತರಣೆ ಮಾಡುವ ಮೂಲಕ ಪ್ರಾಥಮಿಕ ಶಿಕ್ಷಣಕ್ಕೆ ಮಹತ್ವ ನೀಡಲಾಗುತ್ತಿದೆ. ಕೆಲವರು ತಮ್ಮ ಮಕ್ಕಳಿಗೆ 6ವರ್ಷ ವಯಸ್ಸಾಗಿರುವುದು ತಿಳಿಯದೆ ಸುಮ್ಮನಿರುತ್ತಾರೆ. ಅಂತಹವರಿಗೆ ಈ ಜಾಥಾ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು. ಜಾಥಾಕ್ಕೆ ಗ್ರಾಮದ ಕೆಲ ಮುಖಂಡರು ಸಾಥ್ ನೀಡಿದ್ದರು. ಶಿಕ್ಷಕರು, ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.