ಸರ್ಕಾರಿ ಶಾಲೆ, ಆಸ್ಪತ್ರೆ ಅಭಿವೃದ್ಧಿಗೆ ಪ್ರದೀಪ್ ಈಶ್ವರ್ ಮನವಿ

ಬೆಂಗಳೂರು, ಜು. ೧೨- ಬಡವರ ದೇಗುಲಗಳಾಗಿರುವ ಸರ್ಕಾರಿ ಶಾಲೆ ಮತ್ತು ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಕಾಂಗ್ರೆಸ್‌ನ ಪ್ರದೀಪ್ ಈಶ್ವರ್ ವಿಧಾನಸಭೆಯಲ್ಲಿಂದು ಹೇಳಿದರು.
ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಡವರ ಪಾಲಿಗೆ ಸರ್ಕಾರಿ ಆಸ್ಪತ್ರೆಗಳು ಮತ್ತು ಸರ್ಕಾರಿ ಶಾಲೆಗಳೆ ದೇಗುಲ. ಈ ದೇಗುಲಗಳನ್ನು ಉಳಿಸಿ, ಬೆಳೆಸಿದರೆ ಬಡವರಿಗೆ ಅನುಕೂಲವಾಗುತ್ತದೆ. ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೂ ನೆರವು ನೀಡಿದಂತಾಗುತ್ತದೆ ಎಂದರು.
೧ ರಿಂದ ೧೦ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿರುವ ವಿದ್ಯಾರ್ಥಿಗಳ ಉನ್ನತ ಶಿಕ್ಷಣ ಜವಾಬ್ದಾರಿಯನ್ನು ಸರ್ಕಾರವೇ ತೆಗೆದುಕೊಳ್ಳಬೇಕು. ಈ ಮೂಲಕ ಕನ್ನಡ ಶಾಲೆಯನ್ನು ಬಲಪಡಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಇಂಗ್ಲೀಷ್ ಇರುವುದೆ ತಪ್ಪು ಮಾತನಾಡಲಿಕ್ಕೆ, ಕನ್ನಡ ಇರುವುದು ಸರಿಯಾಗಿ ಮಾತನಾಡಲು. ಹಾಗಾಗಿ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ ಎಂದು ಅವರು ಹೇಳಿದರು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಬಡವರ ಕಲ್ಯಾಣ ಯೋಜನೆಗಳಾಗಿವೆ. ಅಕ್ಕಿ ಎಂಬುದು ಕೇವಲ ರೇಷನ್ ಅಲ್ಲ, ಅದು ಬಡವರಿಗೆ ದೇವರಿದ್ದಂತೆ. ಹಸಿದವರಿಗಷ್ಟೇ ಹಸಿವಿನ ಬೆಲೆ ಗೊತ್ತಿದೆ ಎಂದರು.
ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆಯಿಂದಲೂ ಬಡವರ ಕಲ್ಯಾಣವಾಗುತ್ತದೆ. ತನ್ನ ತಾಯಿ ನಮ್ಮನ್ನೆಲ್ಲಾ ಸಣ್ಣಪುಟ್ಟ ಕೆಲಸ ಮಾಡಿ ಸಲುಹಿದರು. ಗೃಹಲಕ್ಷ್ಮಿ ಯೋಜನೆಯಡಿ ೨ ಸಾವಿರ ರೂ. ನೀಡುವುದರಿಂದ ಬಡವರ ಬದುಕು ರೂಪಿಸಿಕೊಳ್ಳಲು ನೆರವಾಗುತ್ತದೆ ಎಂದರು.
ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಸಹ ಬಡವರ ಬಾಳಿಗೆ ಬೆಳಕು ತಂದಿದೆ. ವಿದ್ಯುತ್ ಬಿಲ್ ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ಬಡವರ ಮನೆಯಲ್ಲಿ ತಡರಾತ್ರಿವರೆಗೂ ಮಕ್ಕಳು ಓದಲು ಕಷ್ಟವಿತ್ತು. ಈಗ ಉಚಿತ ವಿದ್ಯುತ್‌ನಿಂದ ವಿದ್ಯಾರ್ಥಿಗಳು ತಡರಾತ್ರಿವರೆಗೂ ಓದಬಹುದು. ಅವರ ಬದುಕು ಬೆಳಗುತ್ತದೆ ಎಂದು ಪ್ರದೀಪ್ ಈಶ್ವರ್ ಹೇಳಿದರು.
ಜನಾರ್ಧನರೆಡ್ಡಿ ಮಾತು
ಈ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಕಲ್ಯಾಣ ಕರ್ನಾಟಕ ಪ್ರಗತಿಪರ ಪಕ್ಷದ ಜನಾರ್ಧನರೆಡ್ಡಿ ಅವರು, ಗ್ಯಾರಂಟಿ ಯೋಜನೆಗಳಿಂದ ತಮ್ಮ ಪಕ್ಷ ೧೦-೧೫ ಸೀಟು ಗೆಲ್ಲಬಹುದು ಎಂಬ ಹುಸಿಯಾಯಿತು. ನಾನೊಬ್ಬನೇ ಗೆದ್ದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಕಾರಣವಾದ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಷರತ್ತಿಗ ಇಲ್ಲದೆ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ಗಂಗಾವತಿ ಕ್ಷೇತ್ರದ ಆಂಜನಾದ್ರಿ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ೧೨೦ ಕೋಟಿ ರೂ. ನೀಡುವುದಾಗಿ ಹೇಳಿತ್ತು. ಆದರೆ ಆ ಹಣ ಬಿಡುಗಡೆಯಾಗಿಲ್ಲ. ಕಾಂಗ್ರೆಸ್ ಸರ್ಕಾರ ಇದನ್ನು ಪರಿಶೀಲಿಸಿ ಅಂಜನಾದ್ರಿ ಅಭಿವೃದ್ಧಿಗೆ ೧೨೦ ಕೋಟಿ ರೂ.ಗಳಿಗ ಹೆಚ್ಚು ಹಣ ನೀಡಬೇಕು ಎಂದು ಒತ್ತಾಯಿಸಿದರು.
ವಿಶ್ವವಿಖ್ಯಾತ ಹಂಪಿಗೆ ತೆರಳಲು ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ ನಿರ್ಮಿಸಬೇಕು ಎಂದು ಅವರು ಒತ್ತಾಯಿಸಿ, ಹಂಪಿ-ಆನೆಗುಂದಿ ರಸ್ತೆಯನ್ನು ಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವಂತೆಯೂ ಅವರು ಸಲಹೆ ನೀಡಿದರು.