ಸರ್ಕಾರಿ ಶಾಲೆಯ 36 ಸಾವಿರ ಮಕ್ಕಳಿಗೆ ಎಪ್ಸನ್ ನೆರವು

ಕೋಲಾರ,ಜು,೬-ಸ್ವರ್ಧಾತ್ಮಕ ಜಗತ್ತಿನ ಪೈಪೋಟಿ ಎದುರಿಸಲು ಮಕ್ಕಳಿಗೆ ಶಕ್ತಿ ತಂಬುವುದರ ಜತೆಗೆ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಎಪ್ಸನ್ ಕಂಪನಿ ಕೋಲಾರ ತಾಲ್ಲೂಕಿನ ೩೬ ಸಾವಿರ ಮಕ್ಕಳಿಗೆ ಪ್ರಸ್ತುತ ಸಾಲಿನಲ್ಲಿ ೩ ಕೋಟಿ ಮೌಲ್ಯದ ಬ್ಯಾಗ್, ನೋಟ್‌ಪುಸ್ತಕ, ವಾಟರ್‌ಫಿಲ್ಟರ್, ಡಿಜಟಲ್ ಕ್ಲಾಸ್ ರೂಂ ಸೌಲಭ್ಯ ಕಲ್ಪಿಸುತ್ತಿದೆ ಎಂದು ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿ ವಿಜಯ್ ಗೋವಿಂದ್ ತಿಳಿಸಿದರು.
ತಾಲ್ಲೂಕಿನ ವೇಮಗಲ್ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶಿಕ್ಷಕ ಗೆಳೆಯರ ಬಳಗದ ಆಶ್ರಯದಲ್ಲಿ ಎಪ್ಸನ್ ಕಂಪನಿ ಕೊಡುಗೆಯಾಗಿ ನೀಡಿರುವ ೩ ಕೋಟಿ ಮೌಲ್ಯದ ಬ್ಯಾಗ್ ಹಾಗೂ ನೋಟ್ ಪುಸ್ತಕಗಳನ್ನು ತಾಲ್ಲೂಕಿನ ಸರ್ಕಾರಿ ಶಾಲೆಗಳಿಗೆ ವಿತರಿಸಿ ಅವರು ಮಾತನಾಡುತ್ತಿದ್ದರು.
ಈ ವರ್ಷ ತಾಲ್ಲೂಕಿನ ೩೧ ಕ್ಲಸ್ಟರ್ ಹಾಗೂ ಮಾಲೂರಿನ ೫, ಶ್ರೀನಿವಾಸಪುರದ ಐದು ಪ್ರೌಢಶಾಲೆ, ಮುಳಬಾಗಿಲು ತಾಲ್ಲೂಕಿನ ಎರಡು ಪ್ರೌಢಶಾಲೆ ಸೇರಿದಂತೆ ೪೫೦ ಸರ್ಕಾರಿ ಶಾಲೆಗಳ ೩೬ ಸಾವಿರ ಮಕ್ಕಳಿಗೆ ತಲಾ ೬ ಪುಸ್ತಕದಂತೆ ಎಪ್ಸನ್ ಕಂಪನಿ ಒದಗಿಸಿದ್ದು, ಇದರ ಜತೆಗೆ ಅತ್ಯಂತ ಉತ್ತಮ ಗುಣಮಟ್ಟದ ಬ್ಯಾಗ್, ಆಯ್ದ ಶಾಲೆಗಳಿಗೆ ಡಿಜಿಟಲ್ ಕ್ಲಾಸ್ ರೂಂ ಒದಗಿಸಿದೆ ಎಂದರು.
ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ಲಘುವಾಗಿ ಪರಿಗಣಿಸಿದಾಗ ಮಕ್ಕಳು ದಾರಿ ತಪ್ಪುತ್ತಾರೆ ಎಂದು ಎಚ್ಚರಿಸಿದ ಅವರು, ಮಕ್ಕಳನ್ನು ಸಮಾಜ,ದೇಶಕ್ಕೆ ಆಸ್ತಿಯನ್ನಾಗಿ ಮಾಡಿ ಎಂದು ಕಿವಿಮಾತು ಹೇಳಿದರು.
ಎಪ್ಸನ್ ಕಂಪನಿ ನೀಡುತ್ತಿರುವ ಈ ಕೊಡುಗೆ ವ್ಯರ್ಥವಾಗಬಾರದು, ದುರ್ಬಳಕೆಯಾಗಬಾರದು ಎಂಬ ಕಾರಣದಿಂದ ಹೆಚ್ಚಿನ ಎಚ್ಚರಿಕೆ ವಹಿಸಿದ್ದು, ಪ್ರತಿ ಶಾಲೆಗೂ ನಾವೇ ಖುದ್ದು ಬಂದು ವಿತರಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಎಪ್ಸನ್ ಕಂಪನಿಯ ಮತ್ತೊಬ್ಬ ಅಧಿಕಾರಿ ವಿನಾಯಕ್ ಮಾತನಾಡಿ, ನಮಗೆ ಸರ್ಕಾರಿ ಶಾಲೆಗಳ ಅಭಿವೃದ್ದಿಯೇ ಟಾರ್ಗೆಟ್ ಆಗಿದೆ, ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ಕೊರತೆ ಕಾಡಬಾರದು, ಅವರ ಕಲಿಕೆಗೆ ಯಾವುದೇ ಅಡ್ಡಿಯಾಗಬಾರದು ಎಂದು ಕಳೆದ ೧೬ ವರ್ಷಗಳಿಂದ ನೆರವು ನೀಡುತ್ತಿದ್ದೇವೆ. ನಮ್ಮ ನೆರವನ್ನು ಶಿಕ್ಷಕ ಗೆಳೆಯರ ಬಳಗದ ಸದಸ್ಯರು ಅತ್ಯಂತ ಯಶಸ್ವಿಯಾಗಿ ಮಕ್ಕಳಿಗೆ ತಲುಪಿಸಲು ನೆರವಾಗುತ್ತಿದ್ದು, ಇದರಿಂದ ಮತ್ತಷ್ಟು ನೆರವು ಈ ತಾಲ್ಲೂಕಿಗೆ ಹರಿಸಲು ನಾವು ಸಿದ್ದತೆ ನಡೆಸಿದ್ದೇವೆಂದು ತಿಳಿಸಿದರು.
ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ಎಸ್.ನಾರಾಯಣಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲೆಗಳನ್ನು ಉಳಿಸುವ ಸದುದ್ದೇಶದಿಂದ ಶಿಕ್ಷಕ ಗೆಳೆಯರ ಬಳಗ ಈ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಪ್ಸನ್ ಕಂಪನಿ ಅಧಿಕಾರಿಗಳಾದ ಅರುಣ್, ಶಿಕ್ಷಕ ಗೆಳೆಯರ ಬಳಗದ ಗೌರವಾಧ್ಯಕ್ಷ ಆರ್.ಶ್ರೀನಿವಾಸನ್, ಬಳಗದ ವೆಂಕಟಾಚಲಪತಿಗೌಡ, ಚಂದ್ರಪ್ಪ, ಚಿಕ್ಕಣ್ಣ, ಸೀರೆಸಂದ್ರನಾಗರಾಜ್, ಕೆಂಬೋಡಿ ಮಂಜುನಾಥ್, ಕೃಷ್ಣಪ್ಪ, ಸಿಆರ್‌ಪಿ ಗೋವಿಂದ್, ಸೋಮಶೇಖರ್, ವೆಂಕಟರಾಂ, ಪಾಪಣ್ಣ,ಬಾಬುರಾವ್, ಮುಖ್ಯಶಿಕ್ಷಕ ವೆಂಕಟೇಶಪ್ಪ, ದೈಹಿಕ ಶಿಕ್ಷಕ ವೆಂಕಟೇಶ್, ಚಾಮುಂಡೇಶ್ವರಿ, ಮಂಜುಳಾ ಮತ್ತಿತರರಿದ್ದರು.