ಸರ್ಕಾರಿ ಶಾಲೆಯ ಶಿಕ್ಷಕರ ಸೇವೆ ಅನನ್ಯ 

ಹರಿಹರ.ಜ.೧೮: ಆಡಳಿತ ಸರ್ಕಾರಗಳು ಶಿಕ್ಷಣದ ಮೌಲ್ಯವನ್ನು ಹೆಚ್ಚಿಸಲು ದಿನಕ್ಕೊಂದು ಹೊಸ ಯೋಜನೆಗಳನ್ನು ಜಾರಿ ಮಾಡುತ್ತವೆ, ಅವುಗಳನ್ನು ಅನುಷ್ಠಾನಿಸಲು ಸರ್ಕಾರಿ ಶಾಲೆಗಳ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಹನಗವಾಡಿ ಗ್ರಾಮ ಪಂಚಾಯಿತಿ ಸದಸ್ಯ ಪ್ರವೀಣ್ ಆರ್.ಬಿ ಮೆಚ್ಚುಗೆ ವ್ಯಕ್ತಪಡಿಸಿದರು. ತಾಲೂಕಿನ ಹನಗವಾಡಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಬೆಳ್ಳೂಡಿ ಕ್ಲಸ್ಟರ್ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳ ಶಿಕ್ಷಕರು ಸರ್ಕಾರಗಳು ನೀಡುವ ಎಲ್ಲಾ ಕೆಲಸಗಳನ್ನೂ ಸಹ ಜವಾಬ್ದಾರಿಯುತವಾಗಿ ಮಾಡುತ್ತಿದ್ದಾರೆ. ಮಕ್ಕಳ ಕಲಿಕೆಯನ್ನು ಹೆಚ್ಚಿಸುವ ನಿಟ್ಟನಲ್ಲಿ ಈ ಕಲಿಕಾ ಹಬ್ಬವನ್ನು ಆಚರಿಸುತ್ತಿರುವುದು ಶ್ಲಾಘನಿಯ. ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲೆ ಎಂಬ ಕೀಳಿರಿಮೆ ಬೇಡ, ಖಾಸಗಿ ಶಾಲೆಗಳಿಗಿಂತ ಹೆಚ್ಚು ಶ್ರಮ ಹಾಗೂ ಹೊಸ ಹೊಸ ಆಟ ಪಾಠಗಳನ್ನು ಕಲಿಸುತ್ತಾ ಪೋಷಕರಿಗಿಂತ ಚನ್ನಾಗಿ ನೋಡಿಕೊಳ್ಳುವವರು ಸರ್ಕಾರಿ ಶಾಲೆಯ ಶಿಕ್ಷಕರು. ವಿದ್ಯಾರ್ಥಿಗಳು ಮೊಬೈಲ್ ಮತ್ತು ಟಿ.ವಿ ನೋಡುವುದನ್ನು ಬಿಟ್ಟು ಕಲಿಕೆಯಕಡೆ ಮನಸ್ಸನ್ನು ಕಟ್ಟಿ ಹಾಕಬೇಕು. ನೀವುಗಳು ಉತ್ತಮ ಪ್ರಜೆಗಳಾಗಿ, ಉನ್ನತ ಹುದ್ದೆಗಳನ್ನು ಪಡೆದರೆ ನಿಮಗೆ ಕಲಿಸಿದ ಶಿಕ್ಷಕರ ಕೀರ್ತಿ ಹೆಚ್ಚುತ್ತದೆ ಎಂದು ಸಲಹೆ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ಅವರು ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿನ ಮಕ್ಕಳ ಕಲಿಕೆಗೆ ಒತ್ತು ನೀಡಲು ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಕೋವಿಡ್ ನಂತರ ಸರ್ಕಾರಿ ಶಾಲೆಗಳ ಕಲಿಕಾ ವಿಧಾನದಲ್ಲಿ ಅನೇಕ ಬದಲಾವಣೆಗಳಾಗಿವೆ. ಕಲಿಕಾ ಹಬ್ಬದ ಮೂಲಕ ಪರಿಪೂರ್ಣವಾಗಿ ಕಲಿತು ಮುಂದಿನ ಶೈಕ್ಷಣಿಕ ಆರಂಭದ ವೇಳೆಗೆ ಪ್ರತೀ ವಿದ್ಯಾರ್ಥಿಯು ತನ್ನ ತರಗತಿ ಮಟ್ಟದ ಕಲಿಕೆಯನ್ನು ಅಡೆ ತಡೆಗಳಿಲ್ಲದೆ ಸಾಧಿಸುವ ಗುರಿಯನ್ನು ಹೊಂದಿದೆ ಎಂದರು.ಬಿಆರ್‌ಸಿ ಕೃಷ್ಣಪ್ಪ ಅವರು ಮಾತನಾಡಿ, ಕೋವಿಡ್ ಪರಿಣಾಮದಿಂದಾಗಿ ಸುಮಾರು ಎರಡು ವರ್ಷಗಳ ಕಾಲ ಶಾಲೆಯಲ್ಲಿ ಮಗುವಿನ ಕಲಿಕೆ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಕಳೆದ ಎರಡು ವರ್ಷಗಳಲ್ಲಿ ವಿದ್ಯಾರ್ಥಿ ಕಲಿಯಬೇಕಾದ ವಿಷಯ ವಸ್ತುವನ್ನು ಕಲಿತಿಲ್ಲ, ಅದನ್ನು ಸರಿದೂಗಿಸಲು ಸರ್ಕಾರ ಈ ಕಲಿಕಾ ಹಬ್ಬವನ್ನು ಜಾರಿ ಮಾಡಿದೆ. ಸರ್ಕಾರಿ ಶಾಲೆಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ವಿದ್ಯಾಗಮ, ವಠಾರ ಶಾಲೆ, ಇ-ಸಂವೇದ ವೀಡಿಯೋ ಪಾಠಗಳು, ಚಂದನ ಚಾನೆಲ್ ಮೂಲಕ ಟಿ.ವಿ ಪಾಠಗಳು ಉಚಿತವಾಗಿ ನೀಡಿರುವುದು ನಮ್ಮ ಸರ್ಕಾರಿ ಶಾಲೆಗಳ ಹೆಮ್ಮೆಯ ವಿಷಯ ಎಂದು ತಿಳಿಸಿದರು.