ಸರ್ಕಾರಿ ಶಾಲೆಗೆ ಹೈಟೆಕ್ ರೂಪ

ಬೆಂಗಳೂರು,ಮಾ.೧೮- ಸರ್ಕಾರಿ ಶಾಲೆ ಎಂದರೆ ಸೌಲಭ್ಯಗಳ ಕೊರತೆ ಎಂದು ಮೂಗು ಮುರಿಯುವವರೆ ಹೆಚ್ಚು. ಆದರೆ ಇಲ್ಲೊಂದು ಶಾಲೆ ಯಾವ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲದಂತೆ ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗಿದೆ. ಹೌದು, ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ಹೆಗಡೆನಗರದಲ್ಲಿ ಸುಮಾರು ೪.೫ಕೋಟಿ ರೂ. ಅಂದಾಜುವೆಚ್ಚದಲ್ಲಿ ಮಾದರಿ ಉರ್ದು ಶಾಲೆಯನ್ನು ನಿರ್ಮಿಸಲಾಗಿದೆ.

ಸರ್ಕಾರಿ ಉರ್ದು ಮಾದರಿ ಪ್ರಾಥಮಿಕ ಶಾಲೆಯ ಕಟ್ಟಡವನ್ನು
ಎಂಬಸ್ಸಿ ಸಮೂಹದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಜಿತು ವಿರ್ವಾನಿ ಹಾಗೂ ಎಎನ್‌ಝಡ್ ಬೆಂಗಳೂರು ಸರ್ವೀಸ್ ಸೆಂಟರ್‍ನ ವ್ಯವಸ್ಥಾಪಕ ನಿರ್ದೇಶಕ ಎಸ್.ವಿ.ವೆಂಕಟರಾಮನ್ ಹಾಗೂ ಮಾಜಿ ಸಚಿವೆ ನಫೀಜಾ ಫಾಜಲ್, ಸಮಾಜ ಸೇವಕಿ ಮೀನಾಕ್ಷಿ ಕೃಷ್ಣಬೈರೇಗೌಡ ಉದ್ಘಾಟಿಸಿದರು.

ಸುಮಾರು ೬೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯಬಹುದಾಗಿದ್ದು,ಎಂಬಸ್ಸಿ ಆರಿಐಟಿಯು ಶಾಲೆಗೆ ದೈನಂದಿನ ಶಾಲಾ ನಿರ್ವಹಣೆ, ಪೂರ್ಣ ಪ್ರಮಾಣದ ಭದ್ರತೆ, ಸಮಗ್ರ ಆರೋಗ್ಯ ಮತ್ತು ಶೈಕ್ಷಣಿಕ ನೆರವು ನೀಡಲಿದೆ. ಹೀಗಾಗಿ, ಬಡತನ ರೇಖೆಯಲ್ಲಿರುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಪಡೆಯಲು ಅನುಕೂಲವಾಗಲಿದೆ. ಈ ಹಿಂದೆ ೨೦೧೯ ರಲ್ಲಿ ಕೂಡಾ ಉರ್ದು ಶಾಲೆಗೆ ಹೊಂದಿಕೊಂಡಂತೆ ಇದೇ ಮಾದರಿಯಲ್ಲಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಿರ್ಮಿಸಿತ್ತು. ಈ ಶಾಲೆಯಲ್ಲೂ ಸುಮಾರು ೬೦೦ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ವ್ಯವಸ್ಥೆ ಮಾಡಲಾಗಿದೆ.

ಶಾಲೆಯನ್ನು ಲೋಕಾರ್ಪಣೆ ಗೊಳಿಸಿ ಬಳಿಕ ಮಾತನಾಡಿದ ಎಎನ್‌ಝಡ್ ಬೆಂಗಳೂರು ಸರ್ವೀಸ್ ಸೆಂಟರ್‌ನ ವ್ಯವಸ್ಥಾಪಕ ನಿರ್ದೇಶಕ ಎಸ್.ವಿ.ವೆಂಕಟರಾಮನ್ , ಶಿಕ್ಷಣ ಪ್ರತಿ ಮಗುವಿನ ಮೂಲಭೂತ ಹಕ್ಕು.ದೇಶದ ಸಮಗ್ರ ಭವಿಷ್ಯವನ್ನೇ ರೂಪಿಸುತ್ತದೆ. ಹೀಗಾಗಿ, ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಾದ ಮೂಲಸೌಕರ್ಯ ಹಾಗೂ ಕಲಿಕೆಯ ಪರಿಸರವನ್ನು ನಿರ್ಮಿಸಲಾಗಿದೆ. ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಎಂಬಸ್ಸಿ ಆರಿಐಟಿಯ ಸಿಇಒ ಮೈಕ್ ಹೊಲ್ಯಾಂಡ್ ಮಾತನಾಡಿ ಕಾರ್ಪೋರೆಟ್ ಕನೆಕ್ಟ್ ಯೋಜನೆಯಡಿ ಎಎನ್‌ಝಡ್‌ನೊಂದಿಗೆ ನಮ್ಮ ಇಎಸ್‌ಜಿ ಸಹಯೋಗದೊಂದಿಗೆ ನಿರ್ಮಿಸಿರುವುದು ಸಂತಸ ತಂದಿದೆ. ಮಕ್ಕಳ ಭವಿಷ್ಯದ ಯಶಸ್ಸು ದೊರೆಯುವಂತೆ ಮಾಡಲು ಸುರಕ್ಷಿತ ಮತ್ತು ಉತ್ತಮ ಕಲಿಕೆಗೆ ಅವಕಾಶ ಮಾಡಿಕೊಡುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.

ಸುಸಜ್ಜಿತ ಶಾಲೆಯಲ್ಲಿ ಏನೇನಿದೆ?

ಎಎನ್‌ಝಡ್, ಎಂಬಸ್ಸಿ, ಆರಿಐಟಿ, ಇಎಸ್‌ಜಿ ಸಹಯೋಗದಲ್ಲಿ ಕಾರ್ಪೊರೇಟ್ ಕನೆಕ್ಟ್ ಕಾರ್ಯಕ್ರಮದಡಿ ಶಾಲಾ ಕಟ್ಟಡ ನಿರ್ಮಿಸಲಾಗಿದೆ. ೧೫,೦೦೦ ಚದರ ಅಡಿ ವಿಸ್ತೀರ್ಣ ಹೊಂದಿದ್ದು, ೪.೫೦ ಕೋಟಿ ರೂ. ಹೂಡಿಕೆಯಲ್ಲಿ ನಿರ್ಮಿಸಲಾಗಿದೆ. ಇದು ೧೯ ಕ್ಲಾಸ್‌ರೂಂಗಳು, ಸ್ಟಾಫ್ ರೂಂ, ಗ್ರಂಥಾಲಯ ಹಾಗೂ ಕಂಪ್ಯೂಟರ್ ಲ್ಯಾಬ್, ಬಹು ಉದ್ದೇಶಗಳ ಸಭಾಂಗಣ, ಶೌಚಾಲಯಗಳು, ಕೈ ತೊಳೆಯುವ, ಶುದ್ಧ ಕುಡಿಯುವ ನೀರು, ಮಳೆನೀರು ಕೊಯಿಲು, ಸೌರಶಕ್ತಿ ಮತ್ತು ಪೂರ್ಣ ಸುಸಜ್ಜಿತ ಆಟದ ಮೈದಾನ ಹೊಂದಿದೆ.