ಸರ್ಕಾರಿ ಶಾಲೆಗಳ ದತ್ತು ಸ್ವೀಕಾರ ಅಗತ್ಯ: ದೊರೆಸ್ವಾಮಿ

ಬೆಂಗಳೂರು, ಮಾ. ೨೮-ರಾಜ್ಯದಲ್ಲಿ ಇಂದು ಸರ್ಕಾರಿ ಶಾಲೆಗಳಿಂದಲೇ ಕನ್ನಡ ಉಳಿಯುತ್ತಿದೆ. ಕನ್ನಡ ಉಳಿಸಿ ಬೆಳೆಸುವ ಕೆಲಸ ಮಾಡುತ್ತಿರುವ ಇಂತಹ ಸರ್ಕಾರಿ ಶಾಲೆಗಳ ಗುಣಮಟ್ಟ ಕಾಪಾಡಲು ದತ್ತು ಸ್ವೀಕಾರ ಕಾರ್ಯ ಅತ್ಯಗತ್ಯವಾಗಿದೆ ಎಂದು ಶಿಕ್ಷಣ ಸುಧಾರಣೆಗಳ ಸಲಹೆಗಾರ ಪ್ರೊ. ಎಂ.ಆರ್. ದೊರೆಸ್ವಾಮಿ ಮನವಿ ಮಾಡಿದರು.
ಪಿಇಎಸ್ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕರಿಸುವವರು. ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸುವಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು, ದತ್ತು ಸ್ವೀಕರಿಸುವವರ ಸಂಖ್ಯೆ ಹೆಚ್ಚಳವಾಗಬೇಕು ಮತ್ತು ಈಗಾಗಲೇ ದತ್ತು ಸ್ವೀಕರಿಸುವವರು ಕೂಡಲೇ ಅಗತ್ಯ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ತಿಳಿಸಿದರು.
ವಿಧಾನ ಪರಿಷತ್ತಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್. ಈಶ್ವರಪ್ಪ ೧೧,೨೮೪ ಸರ್ಕಾರಿ ಶಾಲೆಗಳಲ್ಲಿ ಪ್ರತ್ಯೇಕ ಶೌಚಾಲಯಗಳಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಈ ಸಂಬಂಧ ರಾಮನಗರ, ಚನ್ನಪಟ್ಟಣ, ಮಾಗಡಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ಇಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯ, ಅಡುಗೆ ಮನೆಗಳ ಕೊರತೆ ಇರುವುದು ಪರಿಶೀಲನೆ ವೇಳೆ ಕಂಡು ಬಂದಿದೆ ಎಂದರು.
ಇನ್ನು ತೆಲಂಗಾಣ ಸರ್ಕಾರವು ಅಲ್ಲಿನ ಸರ್ಕಾರಿ ಶಾಲೆಗಳಿಗೆ ಶೇ. ೧೦೦ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದೆ. ಅದೇ ರೀತಿ ರಾಜ್ಯದಲ್ಲಿಯೂ ಕೇಂದ್ರ ಸರ್ಕಾರದ ‘ಜಲ ಜೀವನ್ ಮಿಷನ್’ ಯೋಜನೆ ಅನುದಾನ ಬಳಸಿಕೊಂಡು ಮೂಲ ಸೌಕರ್ಯ ಕಲ್ಪಿಸಬೇಕೆಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿ, ಜಿಪಂ ಸಿಇಒಗಳಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ ಎಂದರು.
ಕಳೆದ ವರ್ಷದ ಬಜೆಟ್‌ನಲ್ಲಿ ಸರ್ಕಾರಿ ಶಾಲೆ ದತ್ತು ಸ್ವೀಕಾರ ಯೋಜನೆ ಜಾರಿಗೆ ತರಲಾಯಿತು. ಅಂದಿನಿಂದ ಇಂದಿನವರೆಗೆ ಶಾಸಕರು, ಸಂಸದರು, ವಿಧಾನ ಪರಿಷತ್ತಿನ ಸದಸ್ಯರು, ಖಾಸಗಿ ವಿವಿಗಳು ಒಟ್ಟಾರೆ ೩ ಸಾವಿರ ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕಾರ ಮಾಡಿದ್ದಾರೆ. ಶಾಸಕ ರಾಮಲಿಂಗಾರೆಡ್ಡಿ, ವಿಧಾನ ಪರಿಷತ್ತಿನ ಸದಸ್ಯ ಚಿದಾನಂದಗೌಡ ಎಲ್ಲರೂ ತಮ್ಮ ವ್ಯಾಪ್ತಿಯಲ್ಲಿರುವ ಎಲ್ಲ ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕಾರ ಮಾಡಿದ್ದಾರೆ. ಇನ್ನು ಖಾಸಗಿ ವಿವಿ ಮತ್ತು ಕಾಲೇಜುಗಳು ಶಾಲೆ ದತ್ತು ಪಡೆದು ಕಂಪ್ಯೂಟರ್, ಶೌಚಗೃಹ ನಿರ್ಮಾಣ ಮಾಡಿದ್ದಾರೆ. ಆದರೂ, ಇನ್ನೂ ಬಹುತೇಕರು ಶಾಲೆಗಳನ್ನು ದತ್ತು ಪಡೆಯಬೇಕಿದೆ. ಅಲ್ಲದೆ, ಅವರಿಗೆ ನೀಡಿರುವ ಅನುದಾನವನ್ನು ಶಾಲೆಗಳಿಗೆ ಬಳಕೆ ಮಾಡಬೇಕಿದೆ. ಆ ಮೂಲಕ ಸರ್ಕಾರಿ ಶಾಲೆಗಳ ಅಭಿವೃದ್ಧಿ ಮಾಡಬೇಕಿದೆ ಎಂದು ಮನವಿ ಮಾಡಿದರು.
ಈ ವೇಳೆ ಪಿಇಎಸ್ ವಿವಿ ಕುಲಪತಿ ಡಾ. ಜೆ. ಸೂರ್ಯ ಪ್ರಸಾದ್ ಉಪಸ್ಥಿತರಿದ್ದರು.
ಪ್ರತ್ಯೇಕ ಸಮಿತಿ ರಚನೆ
ದತ್ತು ಸ್ವೀಕಾರ ಮಾಡಿದ ಶಾಲೆಗಳ ಅಭಿವೃದ್ಧಿ ನಿರ್ವಹಣೆಗಾಗಿ ರಾಜ್ಯ ಮಟ್ಟದಲ್ಲಿ ಸಲಹಾ ಸಮಿತೆ ರಚನೆ ಮಾಡಲಾಗಿದೆ. ಇದರಲ್ಲಿ ವಿಶ್ರಾಂತ ಕುಲಪತಿ ಡಾ. ಕೆ. ಸಿದ್ದಪ್ಪ, ವಿಧಾನ ಪರಿಷತ್ತಿನ ಸದಸ್ಯ ಎಚ್. ವಿಶ್ವನಾಥ್, ಪಿಇಎಸ್ ವಿವಿ ಕುಲಪತಿ ಡಾ. ಜೆ. ಸೂರ್ಯ ಪ್ರಸಾದ್, ನಿವೃತ್ತ ಐಪಿಎಸ್ ಅಧಿಕಾರಿ ಗೋಪಾಲ್, ನಿವೃತ್ತ ಐಪಿಎಸ್ ಅಧಿಕಾರಿ ಗೋಪಾಲ್ ಹೊಸೂರು, ಮಕ್ಕಳ ತಜ್ಞೆ ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ, ಉದ್ಯಮಿಕರಣ್ ಕುಮಾರ್, ಅದವ್ಯ ಚೇತನ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್ ಸಮಿತಿಯ ಸದಸ್ಯರಾಗಿದ್ದಾರೆ ಎಂದು ಪ್ರೊ. ಎಂ.ಆರ್. ದೊರೆಸ್ವಾಮಿ ತಿಳಿಸಿದರು.
ಸರ್ಕಾರಿ ಶಾಲೆಗಳ ಮಕ್ಕಳಿಗೆ ನೀತಿ ಕತೆಗಳನ್ನು ಬೋಧಿಸುವ ಉದ್ದೇಶದಿಂದ ಸಂಪನ್ಮೂಲ ವ್ಯಕ್ತಿಗಳಿಂದ ೩೫ ನೀತಿ ಕತೆಗಳನ್ನು ಬರೆಸಲಾಗಿದೆ. ಈ ಕತೆ ಪುಸ್ತಕವನ್ನು ಶೀಘ್ರದಲ್ಲೇ ಎಲ್ಲಾ ಸರ್ಕಾರಿ ಶಾಲೆಗಳಿಗೆ ವಿತರಣೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.