ಸರ್ಕಾರಿ ಶಾಲೆಗಳ ಆಸ್ತಿ ಸಮೀಕ್ಷೆ : ಕೊಟ್ರೇಶ್


ಸಂಜೆ ವಾಣಿ ವಾರ್ತೆ
ಕೊಟ್ಟೂರು, ಮೇ.17: ವಿಜಯನಗರ ಜಿಲ್ಲೆಯಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ದಾನಿಗಳು ನೀಡಿರುವ ಭೂಮಿ ಮತ್ತು ಇತರ ಆಸ್ತಿಗಳ ಸಮೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ ಎಂದು ಡಿಡಿಪಿಐ ಕೊಟ್ರೇಶ್ ತಿಳಿಸಿದರು.
 ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಳ್ಳಾರಿಯಿಂದ ವಿಜಯನಗರ ಜಿಲ್ಲೆ, ಪ್ರತ್ಯೇಕವಾದ ಬಳಿಕ ಸರ್ಕಾರಿ ಶಾಲೆಗಳ ಸ್ಥಿರ ಮತ್ತು ಚರ ಆಸ್ತಿ ಎಷ್ಟಿದೆ ಎಂಬುದನ್ನು ನಿಖರ ಮಾಹಿತಿ ಸಂಗ್ರಹಿಸಲು ಇಲಾಖೆ ಮುಂದಾಗಿದೆ. ಸ್ವಾತಂತ್ರ್ಯ ಪೂರ್ವ ಮತ್ತು ನಂತರ ವಿನೋಬಾಭಾವೆ ಅವರ ಭೂದಾನ ಚಳುವಳಿ ಹಾಗೂ ಇತರೆ ದಿನಗಳಲ್ಲಿ ಅನೇಕ ಶ್ರೀಮಂತರು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಭೂದಾನ ಮಾಡಿದ್ದಾರೆ ಎಂದರು.     ಶಾಲೆಯ ಸ್ಥಿರ ಮತ್ತು ಚರ ಆಸ್ತಿಗಳ ಕುರಿತು ದಾಖಲೆಗಳಿವೆ. ಕೆಲವೆಡೆ ಶಾಲೆಗಳ ಆಸ್ತಿಗಳು ಒತ್ತುವರಿ ಆಗಿವೆ. ಇನ್ನು ಕೆಲವೆಡೆ ಕೋರ್ಟಿನಲ್ಲಿ ವ್ಯಾಜ್ಯ ಇವೆ. ಮೊದಲೆಲ್ಲಾ ಸರ್ಕಾರ ಶಾಲೆಗಳಿಗೆ ಸ್ಥಿರ ಮತ್ತು ಚರ ಆಸ್ತಿ ದಾನ ಮಾಡಲಾಗುತ್ತಿತ್ತು. ಬದಲಾದ ಕಾಲದಲ್ಲಿ ಈ ಪದ್ಧತಿ ನಿಂತು ಹೋಗಿದೆ. ಅದರ ಸದ್ದುದ್ದೇಶದಿಂದ ಶಾಲೆಗಳಿಗೆ ನೀಡಿದ ಭೂಮಿ ಇತರ ಆಸ್ತಿಗಳನ್ನು ಉಳಿಸಿ ಕಾಪಾಡಿಕೊಳ್ಳುವುದು ಶಿಕ್ಷಣ ಇಲಾಖೆಯ ಜವಾಬ್ದಾರಿಯಾಗಿದೆ. ಸರ್ಕಾರಿ ಶಾಲೆಯ ಜಾಗ ಯಾರೇ ಒತ್ತುವರಿ ಮಾಡಿದ್ದರೂ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.