ಸರ್ಕಾರಿ ಶಾಲೆಗಳಿಗೆ ರಜೆ ಘೋಷಿಸಿ

ಬೀದರ್:ಜು.22: ಜಿಲ್ಲೆಯಲ್ಲಿ ಸತತ ಮಳೆ ಸುರಿಯುತ್ತಿರುವ ಕಾರಣ ಸರ್ಕಾರಿ ಶಾಲೆಗಳಿಗೆ ರಜೆ ಘೋಷಿಸಬೇಕು ಎಂದು ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘ ಆಗ್ರಹಿಸಿದೆ.

ಸಂಘದ ಜಿಲ್ಲಾ ಅಧ್ಯಕ್ಷ ಪಾಂಡುರಂಗ ಬೆಲ್ದಾರ್ ಈ ಕುರಿತು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಮಳೆಯಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಗೆ ಶಾಲೆಗೆ ನಡೆದುಕೊಂಡು ಬರಲು ಕಷ್ಟವಾಗುತ್ತಿದೆ ಎಂದು ತಿಳಿಸಿದ್ದಾರೆ.

ಅನೇಕ ಶಾಲೆಗಳ ಕಟ್ಟಡಗಳು ಶಿಥಿಲಗೊಂಡಿವೆ. ಮೇಲ್ಛಾವಣಿ ಕುಸಿಯುವ ಹಂತದಲ್ಲಿವೆ. ಹೀಗಾಗಿ ಮಕ್ಕಳು ಹಾಗೂ ಶಿಕ್ಷಕರ ಹಿತ ದೃಷ್ಟಿಯಿಂದ ಮಳೆ ವಿರಾಮ ಕೊಡುವವರೆಗೆ ಶಾಲೆಗಳಿಗೆ ರಜೆ ಘೋಷಣೆ ಮಾಡಬೇಕು ಎಂದು ಬೇಡಿಕೆ ಮಂಡಿಸಿದ್ದಾರೆ.