ಸರ್ಕಾರಿ ಶಾಲೆಗಳಿಗೆ ಫಿಲ್ಟರ್ ಘಟಕ ಕೊಡುಗೆ

ಕೋಲಾರ,ಜು.೮- ಮನುಷ್ಯನ ಆರೋಗ್ಯ ಕೆಡಲು ನೀರೇ ಮೂಲ ಕಾರಣವಾಗಿದ್ದು, ಶಾಲಾ ಮಕ್ಕಳಿಗೆ ಶುದ್ದ ಕುಡಿಯುವ ನೀರು ಒದಗಿಸುವ ಮೂಲಕ ಅವರ ಕಲಿಕೆಗೆ ಯಾವುದೇ ತೊಡಕು ಎದುರಾಗದಂತೆ ಎಪ್ಸನ್ ಕಂಪನಿ ಕ್ರಮವಹಿಸಿದೆ ಎಂದು ಸಂಸ್ಥೆಯ ಜನರಲ್ ಮ್ಯಾನೇಜರ್ ನಾಗೇಂದ್ರ ತಿಳಿಸಿದರು.
ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಗೆ ಎಪ್ಸನ್ ಕಂಪನಿಯಿಂದ ನೀಡಿರುವ ಎರಡು ಶುದ್ದ ಕುಡಿಯುವ ನೀರಿನ ಘಟಕಗಳಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಉತ್ತಮ ಆರೋಗ್ಯಕ್ಕೆ ಶುದ್ದ ಕುಡಿಯುವ ನೀರೇ ಮೂಲಾಧಾರವಾಗಿದೆ, ಇದನ್ನು ಅರಿತು ಸರ್ಕಾರಿ ಶಾಲೆಗಳ ಮಕ್ಕಳಿಗೆ ಫಿಲ್ಟರ್ ನೀರು ಸಿಗುವಂತೆ ಮಾಡಿದ್ದೇವೆ, ತಾಲ್ಲೂಕಿನ ಎಲ್ಲಾ ಶಾಲೆಗಳಿಗೂ ಫಿಲ್ಟರ್ ಒದಗಿಸಲು ಕ್ರಮವಹಿಸಿದ್ದೇವೆ ಎಂದರು.
ಸರ್ಕಾರಿ ಶಾಲೆಗಳ ಬಲವರ್ಧನೆಗೆ ನಮ್ಮೊಂದಿಗೆ ಶಿಕ್ಷಕ ಗೆಳೆಯರ ಬಳಗ ಕೈಜೋಡಿಸಿದ್ದು, ನಾವು ನೀಡಿದ್ದನ್ನು ಯಾವುದೇ ಲೋಪಕ್ಕೆ ಅವಕಾಶವಿಲ್ಲದಂತೆ ಮಕ್ಕಳಿಗೆ ತಲುಪಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿ, ಮುಂದಿನ ವರ್ಷಗಳಲ್ಲಿ ಮತ್ತಷ್ಟು ನೆರವು ಒದಗಿಸುವ ಭರವಸೆ ನೀಡಿದರು.
ಮುಖ್ಯಶಿಕ್ಷಕ ಸಿ.ಎನ್.ಪ್ರದೀಪ್ ಕುಮಾರ್ ಮಾತನಾಡಿ, ಎಪ್ಸನ್ ನೆರವಿನಿಂದ ಶಾಲೆಯಲ್ಲಿ ಮಕ್ಕಳು ಕುಡಿಯುವ ನೀರು ಮಾತ್ರವಲ್ಲ, ಅಡುಗೆಗೂ ಶುದ್ದ ಕುಡಿಯುವ ನೀರನ್ನು ಬಳಸಲಾಗುತ್ತಿದೆ ಎಂದು ತಿಳಿಸಿ, ಸಂಸ್ಥೆಗೆ ಧನ್ಯವಾದ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿ ಸ್ಯಾಮ್ಯುಯಲ್, ವಿನಯ್‌ಕುಮಾರ್‌ರೆಡ್ಡಿ, ಅಶೋಕ್‌ಕುಮಾರ್ ದಾಸ್, ಸಬಿತಾ, ನವೀಣ್ ಶೆಟ್ಟಿ, ಶ್ರೀನಿವಾಸರಾವ್, ಆರ್.ಸತ್ಯನಾರಾಯಣ, ಕೆ.ಜಿ.ಲೋಕೇಶ್, ಮೇಘಶ್ರೀ, ಮನುಕುಮಾರ್, ಶಿವಕುಮಾರ್, ಅಮರನಾಥರೆಡ್ಡಿ, ಪ್ರಭು, ಕಮಲ್‌ಪಾಲ್, ಶಿಗೀನಾ, ಶೃತಿ, ಕೆ.ಕೆ.ರಮ್ಯ, ಎಂ.ಶಂಕರ್, ವೈಷ್ಣವಿ, ಶಿಕ್ಷಕ ಗೆಳಯರ ಬಳಗದ ಅಧ್ಯಕ್ಷ ನಾರಾಯಣಸ್ವಾಮಿ, ಉಪಾಧ್ಯಕ್ಷ ವೀರಣ್ಣಗೌಡ, ಗೌರವಾಧ್ಯಕ್ಷ ಆರ್.ಶ್ರೀನಿವಾಸನ್ ಮತ್ತಿತರರಿದ್ದರು.