ಸರ್ಕಾರಿ ಶಾಲೆಗಳಿಗೆ ದಾನಿಗಳ ಸಹಕಾರ ಅಗತ್ಯ

ಗೌರಿಬಿದನೂರು.ನ೧೭: ನಗರ ಸಮೀಪವಿರುವ ಉಡುಮಲೋಡು ಸರ್ಕಾರಿ ಶಾಲಾ ಮಕ್ಕಳಿಗೆ ಮಂಗಳವಾರ ಲಯನ್ಸ್ ಸಂಸ್ಥೆಯ ವತಿಯಿಂದ ಮಕ್ಕಳ ದಿನಾಚರಣೆಯ ಅಂಗವಾಗಿ ಬ್ಯಾಗ್ ಗಳನ್ನು ವಿತರಣೆ ಮಾಡಿದರು.
ಬಳಿಕ ಮಾತನಾಡಿದ ಲಯನ್ಸ್ ಸಂಸ್ಥೆಯ ಅಧ್ಯಕ್ಷೆ ವೈ.ಎನ್.ಅಂಭಿಕಾ ಮಾತನಾಡಿ, ಸರ್ಕಾರಿ ಶಾಲೆಗಳು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿದ್ದು, ಸರ್ಕಾರದ ಜತೆಗೆ ಸ್ಥಳೀಯ ದಾನಿಗಳು ಹಾಗೂ ಪೋಷಕರು ಅವುಗಳನ್ನು ಸದೃಢಗೊಳಿಸುವ ಪ್ರಯತ್ನ ಮಾಡಬೇಕಾಗಿದೆ. ಇದರಿಂದಾಗಿ ಮಕ್ಕಳು ಗುಣಾತ್ಮಕ ಶಿಕ್ಷಣವನ್ನು ಕಲಿತು ಸತ್ಪ್ರಜೆಗಳಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ. ದಾನಿಗಳು ಮಕ್ಕಳ ಕಲಿಕೆಗೆ ಸಹಕಾರಿಯಾಗಬಲ್ಲ ಕಲಿಕಾ ಪರಿಕರಗಳನ್ನು ನೀಡಿದಲ್ಲಿ ಅವರ ಕಲಿಕೆಗೆ ಮತ್ತಷ್ಟು ಪ್ರೇರಣೆ ಸಿಗಲಿದೆ ಎಂದು ಹೇಳಿದರು.
ಸಂಸ್ಥೆಯ ಪದಾಧಿಕಾರಿ ಜಿ.ಎನ್.ಸೂರಜ್, ಸರ್ಕಾರಿ ಶಾಲೆಯ ಮಕ್ಕಳಿಗೆ ಶಿಕ್ಷಣದ ಜತೆಗೆ ಮಾನವೀಯ ಮೌಲ್ಯಗಳನ್ನು ಕಲಿಸುವ ಪ್ರಯತ್ನ ಶಿಕ್ಷಕರು ಮಾಡಬೇಕಾಗಿದೆ. ಇದರಿಂದಾಗಿ ರಾಷ್ಟ್ರ ಹಾಗೂ ಸಮಾಜಕ್ಕೆ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ದಾನಿಗಳು ಸದಾ ಮುಂಚೂಣಿಯಲ್ಲಿರುತ್ತಾರೆ ಎಂದು ಹೇಳಿದರು.
ಇದೇ ವೇಳೆ ಲಯನ್ಸ್ ಸಂಸ್ಥೆಯ ಕಾರ್ಯದರ್ಶಿ ಲಕ್ಷ್ಮಿ, ಪದಾಧಿಕಾರಿಗಳಾದ ಪ್ರೊ.ಕೆ.ರಾಮಾಂಜನೇಯಲು, ಜಬೀ, ನಾಗಾರಾಮ್, ಶಿಕ್ಷಕರಾದ ಬಾಲಪ್ಪ, ಕಲ್ಪನಾ ಭಾಗವಹಿಸಿದ್ದರು.