ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಕಲಿಕೆ ಆರಂಭ- ಅಶ್ವಥ್ ನಾರಾಯಣ

ಬೆಂಗಳೂರು,ಅ.13-ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಪರಿಪೂರ್ಣ ಶಿಕ್ಷಣ ನೀತಿಯಾಗಿದೆ ಎಂದು ಹೇಳಿರುವ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.‌ ಅಶ್ವತ್ಥನಾರಾಯಣ ಅವರು ಸರಕಾರಿ ಶಾಲೆಗಳಲ್ಲಿ ಕೂಡ ಮೂರನೇ ವರ್ಷಕ್ಕೇ ಪೂರ್ವ ಪ್ರಾಥಮಿಕ ಕಲಿಕೆ ಆರಂಭಿಸಲಾಗುವುದು.ಎಂದು ಹೇಳಿದ್ದಾರೆ.

ಗುಣಮಟ್ಟ ಶಿಕ್ಷಣದ ಮೂಲಕ ಭಾರತೀಯರ ಸಬಲೀಕರಣದ ಗುರಿ ಹೊಂದಿದೆ .ಇದರಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಹಕಾರಿಯಾಗಿದೆ ಎಂದಿದ್ದಾರೆ.

ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ನೀತಿಯನ್ನು ಐದಾರು ವರ್ಷಗಳ ದೀರ್ಘ ಸಮಾಲೋಚನೆಯ ನಂತರ ಜಾರಿಗೆ ತರಲಾಗುತ್ತಿದೆ ಎಂದು ಅವರು ಹೇಳಿದರು.

ಬೆಳಗಾವಿಯಲ್ಲಿ ಈಗಾಗಲೇ ಇರುವ ಸಾಫ್ಟ್ ವೇರ್ ಪಾರ್ಕಿಗೆ ಜೀವ ತುಂಬಲಾಗುವುದು. ಜೊತೆಗೆ, ರಕ್ಷಣಾ ಇಲಾಖೆಯ ವಶದಲ್ಲಿರುವ ರಾಜ್ಯ ಸರಕಾರದ 700 ಎಕರೆ ಜಮೀನನ್ನು ಹಿಂತೆಗೆದುಕೊಂಡು, ಇಲ್ಲಿ ಹೊಸ ಐಟಿ ಪಾರ್ಕ್ ಸ್ಥಾಪಿಸಲಾಗುವುದು. ಅಲ್ಲದೆ, ಹಿರೇಬಾಗೇವಾಡಿಯಲ್ಲಿ ನನೆಗುದಿಗೆ ಬಿದ್ದಿರುವ ವಿವಿ ಕ್ಯಾಂಪಸ್ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕೋವಿಡ್ ನಂತರ ಡಿಜಿಟಲ್ ಜ್ಞಾನಿಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಒಬ್ಬೊಬ್ಬ ವ್ಯಕ್ತಿಯೂ ಒಂದೊಂದು ಸಂಸ್ಥೆಯಂತಾಗಿದ್ದಾನೆ. ರಾಜ್ಯ ಸರಕಾರದ ಡಿಜಿಟಲ್ ಎಕಾನಮಿ ಮಿಷನ್’ ಮತ್ತುಬಿಯಾಂಡ್ ಬೆಂಗಳೂರು’ ಯೋಜನೆಗಳ ಮೂಲಕ ರಾಜ್ಯದ ಎಲ್ಲ ಭಾಗಗಳಲ್ಲೂ ಉದ್ದಿಮೆಗಳನ್ನು ಬೆಳೆಸಲಾಗುವುದು ಎಂದರು

ಬಿಎಸ್ ವೈ ಗುಣಗಾನ
ಜಾರಕಿಹೊಳಿಗೆ ಭರವಸೆ

ಬಿ.ಎಸ್ ಯಡಿಯೂರಪ್ಪನವರು ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು, ಪಕ್ಷಕ್ಕಾಗಿ ತ್ಯಾಗವನ್ನು ಮಾಡಿದ್ದಾರೆ. ಸಿಂದಗಿ ಮತ್ತು ಹಾನಗಲ್ ಉಪಚುನಾವಣೆಗೆ ಅವರು ಪ್ರಚಾರ ನಡಸಲಿದ್ದಾರೆ ಎಂದು ಹೇಳಿದರು.

ಹಾಗೆಯೇ, ರಮೇಶ ಜಾರಕಿಹೊಳಿ ಅವರ ಬಗ್ಗೆ ಕೇಳಿದ ಪ್ರಶ್ನೆಗೆ, “ಅವರ ಬಗ್ಗೆ ಪಕ್ಷಕ್ಕೆ ಗೌರವವಿದೆ. ಅವರಿಗೆ ಎದುರಾಗಿರುವ ಸಮಸ್ಯೆ ತಾತ್ಕಾಲಿಕ. ಅದು ನಿವಾರಣೆಯಾದ ಕೂಡಲೇ ಅವರು ಮತ್ತೆ ಸಚಿವ ಸಂಪುಟಕ್ಕೆ ಬರಲಿದ್ದಾರೆ’’ ಎಂದರು