
ಚನ್ನಪಟ್ಟಣ,ಮಾ.೧೦- ಗುಣಮಟ್ಟದ ಶಿಕ್ಷಣ ನೀಡುವ ಶಾಲೆಗಳು ಸರ್ಕಾರಿ ಶಾಲೆಗಳೆಂದರೆ ತಪ್ಪಾಗಲಾರದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಬಿ.ವಿ.ಗಿರೀಶ್ ತಿಳಿಸಿದರು.
ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆಯೋಜನೆ ಮಾಡಲಾಗಿದ್ದ ಅಸಿರ ಚಿತ್ರಕಲಾ ಇನ್‌ಸ್ಟಿಟ್ಯೂಟ್ ಆಶ್ರಯದಲ್ಲಿ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿ ರಾಜ್ಯ ಮಟ್ಟದ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ, ಪ್ರಶಸ್ತಿಪತ್ರ ವಿತರಣೆ ಹಾಗೂ ಗೀತಗಾಯನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಶಾಲೆಯ ಮಕ್ಕಳಲ್ಲಿ ಉತ್ತಮವಾದ ಪ್ರತಿಭೆಗಳಿದ್ದು ಅಂತಹ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸೂಕ್ತವಾದ ವೇದಿಕೆಯನ್ನು ಒದಗಿಸುತ್ತಿರುವ ಅಸಿರ ಚಿತ್ರಕಲಾ ಸಂಸ್ಥೆಯ ಬಗ್ಗೆ ಎಷ್ಟು ಪ್ರಶಂಸೆ ಮಾಡಿದರೆ ಸಾಲದು ಎಂದು ಸಂಸ್ಥೆಯ ಕಾರ್ಯಚಟುವಟಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮಕ್ಕಳು ಶಾಲೆಯಲ್ಲಿ ನೀಡುವ ಶಿಕ್ಷಣದ ಜೊತೆಯಲ್ಲಿಯೇ ಪಠ್ಯೇತರ ಶಿಕ್ಷಣವನ್ನು ಅಂದರೆ ಚಿತ್ರಕಲೆ, ಸಂಗೀತ,ನೃತ್ಯ, ಕ್ರೀಡಾ ಚಟುವಟಿಕೆಗಳನ್ನು ಮೈಗೂಡಿಸಿಕೊಂಡಾಗ ನಿಮ್ಮ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬ ಮಕ್ಕಳಿಗೂ ಗುರು ಗುರಿ ಇದ್ದಾಗ ಮಾತ್ರ ಜೀವನದಲ್ಲಿ ಯಾವ ಸಾಧನೆಯನ್ನು ಮಾಡಲು ಸಾಧ್ಯ ಎಂದರು.
ಪರೀಕ್ಷಾ ಸಮಯವಾಗಿರುವುದರಿಂದ ತಮ್ಮ ಗಮನವನ್ನು ವಿದ್ಯಾಭ್ಯಾಸದ ಕಡೆ ತೋರಿಸಬೇಕು,ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಂತೂ ನಿಮ್ಮ ಜೀವನದ ಮೊದಲ ಘಟ್ಟವಾಗಿರುವುದರಿಂದ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಿ ಉನ್ನತಮಟ್ಟದ ಶ್ರೇಣಿಯಲ್ಲಿ ಉತ್ತೀರ್ಣರಾಗುವುದರ ಮುಖಾಂತರ ಶಾಲೆಗೂ ಹಾಗೂ ಹೆತ್ತ ತಂದೆತಾಯಿಗೆ ಕೀರ್ತಿ ತರಬೇಕು ಎಂದು ತಿಳಿಸಿದರು.