ಸರ್ಕಾರಿ ಶಾಲೆಗಳನ್ನು ಮುಚ್ಚುವ ಬದಲು ಬಲಪಡಿಸಲು ಆಗ್ರಹಿಸಿ ಕೊಳಗೇರಿ ನಿವಾಸಿಗಳ ಪ್ರತಿಭಟನೆ

ಕಲಬುರಗಿ:ಆ.02:ಸರ್ಕಾರಿ ಶಾಲೆಗಳನ್ನು ಮುಚ್ಚುವ ಬದಲಾಗಿ ಬಲಪಡಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಕೊಳಗೇರಿಗಳ ನಿವಾಸಿಗಳ ಒಕ್ಕೂಟದ ನೇತೃತ್ವದಲ್ಲಿ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.
ಪ್ರತಿಭಟನೆಕಾರರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ರಾಜ್ಯ ಸರ್ಕಾರ ರಾಜ್ಯಾದ್ಯಂತ 13800 ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಮುಚ್ಚುವ ನಿರ್ಧಾರ ಮಾಡಿರುವುದು ಬಡವರ ಮತ್ತು ದಲಿತ, ಹಿಂದುಳಿದ ಮಕ್ಕಳಿಗೆ ಶಿಕ್ಷಣದಿಂದ ವಂಚಿಸುವ ಮತ್ತು ಕನ್ನಡ ವಿರೋಧಿ ನಿಲುವಾಗಿದೆ ಎಂದು ಆಕ್ಷೇಪಿಸಿದರು.
ರಾಜ್ಯ ಸರ್ಕಾರ ಈ ಹಿಂದೆ 2011ರಲ್ಲಿ ಪ್ರೊ. ಗೋವಿಂದ್ ಅವರ ವರದಿ ತರಿಸಿಕೊಂಡು ಸುಮಾರು 12000 ಶಾಲೆಗಳನ್ನು ಮುಚ್ಚಲು ನಿರ್ಧರಿಸಿತ್ತು. ಅಂದಿನ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರ ನಿಲುವು ವಿರೋಧಿಸಿ ರಾಜ್ಯಾದ್ಯಂತ ಅನೇಕ ಸಂಘಟನೆಗಳು ವಿರೋಧಿಸಿದ್ದರಿಂದ ಹಾಗೂ ಗಂಗಾವತಿಯಲ್ಲಿ ಜರುಗಿದ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಖ್ಯಮಂತ್ರಿಗಳ ವಿರುದ್ಧ ಪ್ರತಿಭಟನೆ ಮಾಡಿದಾಗ ಸರ್ಕಾರಿ ಶಾಲೆಗಳನ್ನು ಅಂದು ಉಳಿಸಿಕೊಳ್ಳಲು ಸಾಧ್ಯವಾಯಿತು. ಅಂದು ಸಾಹಿತ್ಯ ಸಮ್ಮೇಳನದಲ್ಲಿ ಸರ್ಕಾರಿ ಶಾಲೆಯಲ್ಲಿ ಒಂದು ಮಗು ಇದ್ದರೂ ಶಾಲೆಯನ್ನು ಮುಚ್ಚುವುದಿಲ್ಲ ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕ್ರಮದಲ್ಲಿ ಇಂತಹ ನಿರ್ಣಯ ಕೈಗೊಳ್ಳಲಾಗಿತ್ತು. ಇದನ್ನು ಹಾಲಿ ಮುಖ್ಯಮಂತ್ರಿಗಳು ತಿಳಿದುಕೊಳ್ಳಬೆಕು ಎಂದು ಅವರು ಒತ್ತಾಯಿಸಿದರು.
ಸರ್ಕಾರಿ ಶಾಲೆಗಳಿಗೆ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದ ಅವರು, ಸರ್ಕಾರಿ ಶಾಲೆಗಳಲ್ಲಿ 35000ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. 4767 ಏಕೋಪಾಧ್ಯಾಯ ಶಾಲೆಗಳಿವೆ. ಮೂಲ ಸೌಕರ್ಯಗಳು ಇಲ್ಲದೇ ಇರುವುದರಿಂದ ಕೆಲ ಕಡೆಗಳಲ್ಲಿ ಒಂದು ಶಾಲೆಗೆ ವರ್ಷಕ್ಕೆ ಕೇವಲ ಐದಾರು ವಿದ್ಯಾರ್ಥಿಗಳು ದಾಖಲಾಗುತ್ತಿದ್ದಾರೆ. ಮೂಲ ಸೌಕರ್ಯಕ್ಕೆ ಒತ್ತು ಕೊಡದೇ ಶಾಲೆಗಳನ್ನು ವಿಲೀನಕ್ಕೆ ಮುಂಗಾಗುತ್ತಿರುವುದು ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರವೇ ಹೊರತು ಬೇರೆ ಏನಲ್ಲ ಎಂದು ಅವರು ತಿಳಿಸಿದರು.
ಪ್ರತಿಭಟನೆಯಲ್ಲಿ ಬಾಬುರಾವ್ ದಂಡಿನಕರ್, ಅಲ್ಲಮಪ್ರಭು ನಿಂಬರ್ಗಾ, ವಿಕಾಸ್ ಸಾವರಿಕರ್, ಗಣೇಶ್ ಕಾಂಬಳೆ, ಶ್ರೀಮತಿ ಭಾಗಮ್ಮ ಬನಸೋಡೆ, ಯಮನಪ್ಪ ಪ್ರಸಾದ್, ಬ್ರಹ್ಮಾನಂದ್ ಮಿಂಚಾ, ಶೇಖರ್‍ಸಿಂಗ್, ಅನಿಲ್ ಚಕ್ರ, ಮಲ್ಲಿಕಾರ್ಜುನ್ ಕಾಂಬಳೆ, ಶಾಮರಾವ್ ಸಿಂಧೆ, ಬಸವರಾಜ್ ಧಾಡಿ, ಕರಣಕುಮಾರ್ ಬಂದರವಾಡ್, ಶಿವಕುಮಾರ್ ಚಿಂಚೋಳಿ, ಶ್ರೀಮತಿ ಕವಿತಾ ಇನಾಂದಾರ್ ಮುಂತಾದವರು ಪಾಲ್ಗೊಂಡಿದ್ದರು.