ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರ

ಕೋಲಾರ,ಅ೨೯:ಹಾಲು ಒಕ್ಕೂಟ ಸಾಮಾಜಿಕ ಕಾರ್ಯಗಳಿಗಾಗಿಯೇ ೧೨ ಕೋಟಿ ದತ್ತಿ ನಿಧಿ ಸ್ಥಾಪಿಸಿದ್ದು, ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಹಾಗೂ ಹಾಲು ಉತ್ಪಾದಕರ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಎಲ್ಲಾ ರೀತಿಯ ನೆರವು ಒದಗಿಸಲು ಸಿದ್ದವಿದೆ ಎಂದು ಕೋಲಾರ,ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಅಧ್ಯಕ್ಷ ಹಾಗೂ ಶಾಸಕ ಕೆ.ವೈ.ನಂಜೇಗೌಡ ಭರವಸೆ ನೀಡಿದರು.
ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಎಸ್ಸೆಸ್ಸೆಲ್ಸಿ ಮಕ್ಕಳಿಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಕೋಚಿಮುಲ್‌ನಿಂದ ಮುದ್ರಿಸಿ ಹೊರ ತಂದಿರುವ ‘ನನ್ನನ್ನೊಮ್ಮೆ ಗಮನಿಸಿ’ಪ್ರಶ್ನೋತ್ತರ ಕೋಠಿ, ‘ಚಿತ್ರಬಿಡಿಸು ಅಂಕಗಳಿಸು’ , ಕನ್ನಡ,ಇಂಗ್ಲೀಷ್, ಉರ್ದು ಮಾಧ್ಯಮದ ಅಭ್ಯಾಸಹಾಳೆಗಳು ಸೇರಿದಂತೆ ಒಟ್ಟು ೧೭ ಶೀರ್ಷಿಕೆಯ ಪುಸ್ತಕಗಳನ್ನು ಬಿಡುಗಡೆ ಮಾಡಿ, ಶಾಲೆಗಳಿಗೆ ಸಾಂಕೇತಿಕವಾಗಿ ವಿತರಿಸಿ ಅವರು ಮಾತನಾಡುತ್ತಿದ್ದರು.
ಕೋಚಿಮುಲ್ ಹಾಲು ಉತ್ಪಾದಕರ ಮಕ್ಕಳಿಗೆ ವಿಶೇಷವಾಗಿ ವಿದ್ಯಾರ್ಥಿವೇತನ ನೀಡುತ್ತಿದ್ದು, ಎಸ್ಸೆಸ್ಸೆಲ್ಸಿ ಸಾಧಕರಿಗೆ ತಲಾ ೫ ಸಾವಿರ, ಪಿಯುಸಿ ಸಾಧಕರಿಗೆ ತಲಾ ೭.೫೦೦, ವೈದ್ಯಕೀಯ ವಿದ್ಯಾರ್ಥಿಗಳಿಗೆ ೨೫ ಸಾವಿರ, ಇಂಜಿನಿಯರಿಂಗ್ ಮತ್ತು ಪದವಿ ವಿದ್ಯಾರ್ಥಿಗಳಿಗೆ ತಲಾ ೨೦ ಸಾವಿರ ರೂ ಹಾಗೂ ಐಎಎಸ್,ಕೆಎಎಸ್ ಆಕಾಂಕ್ಷಿಗಳಿಗೆ ೫೦ ಸಾವಿರ ನೆರವು ನೀಡುತ್ತಿದೆ ಎಂದು ತಿಳಿಸಿದರು.
ಬೆಂಗಳೂರಿನ ಯಲಹಂಕದಲ್ಲಿ ಈಗಾಗಲೇ ಅವಿಭಜಿತ ಜಿಲ್ಲೆಯ ಶಿಕ್ಷಣಾರ್ಥಿಗಳಿಗಾಗಿ ಸುಸಜ್ಜಿತ ಹಾಸ್ಟೆಲ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಇದಕ್ಕಾಗಿ ನಿವೇಶನವನ್ನು ಸರ್ಕಾರ ಒದಗಿಸಿದೆ ಎಂದರು.
ಕೋಚಿಮುಲ್‌ನಲ್ಲಿ ೧೦೦ಕೋಟಿ ರೂಗಳ ಅಭಿವೃದ್ದಿ ನಿಧಿ ಇಟ್ಟಿದ್ದೇವೆ, ಎಂವಿಕೆ ಡೇರಿ ಸ್ಥಾಪಿಸುವ ಯತ್ನ ಮುಂದುವರೆದಿದೆ ಎಂದ ಅವರು, ತಾಲ್ಲೂಕು ಹಂತದಲ್ಲಿ ಶಿಬಿರಕಚೇರಿ, ಎಂಪಿಸಿಎಸ್‌ಗಳಿಗೆ ನೂತನ ಕಟ್ಟಡ, ರಾಸು ಸತ್ತರೆ ೭೫ ಸಾವಿರ ರೂ ವಿಮೆ ಮತ್ತಿತರ ಸಾಮಾಜಿಕ ಕಾರ್ಯಗಳಿಗೂ ಸಿದ್ದವಿದ್ದೇವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ವೆಂಕಟರಾಜಾ, ಕಳೆದ ವರ್ಷ ಫೆಬ್ರವರಿಯಲ್ಲಿ ಈ ಪುಸ್ತಕಗಳನ್ನು ಮಕ್ಕಳಿಗೆ ಒದಗಿಸಿದ್ದು, ಶೇ.೯೪ರಷ್ಟು ಫಲಿತಾಂಶದ ಸಾಧನೆ ಮಾಡಿದ್ದೀರಿ, ಈಬಾರಿ ಅತಿ ಬೇಗ ಮಕ್ಕಳಿಗೆ ಒದಗಿಸುತ್ತಿದ್ದು, ಈ ಪುಸ್ತಕಗಳನ್ನು ಪರಿಣಾಮಕಾರಿಯಾಗಿ ಶಾಲೆಗಳಲ್ಲಿ ಬಳಸುವಂತೆಮಾಡಿ ಜಿಲ್ಲೆಯನ್ನು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಪ್ರಥಮ ಸ್ಥಾನಕ್ಕೆ ತನ್ನಿ ಎಂದು ಸಲಹೆ ನೀಡಿದರು.
ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮ ಪಡಿಸುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಡಿಡಿಪಿಐ ಕೃಷ್ಣಮೂರ್ತಿ, ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ಮಾರ್ಗದರ್ಶನದಲ್ಲಿ ಕೈಗೊಂಡಿರುವ ಕಾರ್ಯಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇಲ್ಲಿ ಮಾಡುತ್ತಿರುವ ಕಾರ್ಯ ಬೇರೆ ಜಿಲ್ಲೆಗೆ ಮಾದರಿಯಾಗಿದೆ ಎಂದರು.
ಜಿಪಂ ಸಿಇಒ ಯುಕೇಶ್‌ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿನ ಸರ್ಕಾರದ ಕಾರ್ಯಕ್ರಮಗಳಿಗೆ ಕೋಚಿಮುಲ್ ನೀಡುತ್ತಿರುವ ಸಹಕಾರಕ್ಕೆ ಧನ್ಯವಾದ ಸಲ್ಲಿಸಿದ ಅವರು, ಎಸ್ಸೆಸ್ಸೆಲ್ಸಿ ಮಕ್ಕಳಿಗಾಗಿ ಸಂಪನ್ಮೂಲ ಶಿಕ್ಷಕರು ತಯಾರಿಸಿರುವ ಈ ಪುಸ್ತಕಗಳು ಪರಿಣಾಮಕಾರಿಯಾಗಿ ಬಳಕೆಯಾಗಲಿ, ಇದರಿಂದ ಜಿಲ್ಲೆಯ ಫಲಿತಾಂಶ ಮತ್ತಷ್ಟು ಉತ್ತಮವಾಗಲಿ ಎಂದರು.
ಕಾರ್ಯಕ್ರಮದಲ್ಲಿ ಕೋಚಿಮುಲ್ ನಿರ್ದೇಶಕ ಜಯಸಿಂಹ ಕೃಷ್ಣಪ್ಪ, ಕೋಚಿಮುಲ್ ಎಂಡಿ ಹೆಚ್.ಮಹೇಶ್, ವ್ಯವಸ್ಥಾಪಕ ನಾಗೇಶ್, ವಿಷಯ ಪರಿವೀಕ್ಷಕರಾದ ಕೃಷ್ಣಪ್ಪ, ಗಾಯತ್ರಿ,ಶಶಿವಧನ, ಉಪಪ್ರಾಂಶುಪಾಲರಾದ ವೆಂಕಟೇಶಪ್ಪ, ಕೆಂಪೇಗೌಡ, ಸಹಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ನಾರಾಯಣರೆಡ್ಡಿ, ಮುಖ್ಯಶಿಕ್ಷಕರ ಸಂಘದ ಕಾರ್ಯದರ್ಶಿ ರವಿ, ಮೆಥೋಡಿಸ್ಟ್ ಶಾಲೆಯ ಮಂಜುಳಾ, ಬಾಪೂಜಿ ಶಾಲೆಯ ಅನುರಾಧ ಮತ್ತಿತರರು ಉಪಸ್ಥಿತರಿದ್ದರು.