ಕೋಲಾರ,ಜೂ,೧೯:ಸರ್ಕಾರಿ ಶಾಲೆಗಳಲ್ಲಿನ ಪ್ರತಿಭೆಗಳಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸುವ ಮೂಲಕ ಪ್ರೋತ್ಸಾಹ ನೀಡಿದಲ್ಲಿ ದೇಶದ ಅನೇಕ ಸಾಧಕರು ಇಲ್ಲಿಂದಲೇ ಸಮಾಜಕ್ಕೆ ಆಸ್ತಿಯಾಗಿ ಹೊರಬರುತ್ತಾರೆ ಎಂದು ಬೆಂಗಳೂರಿನ ಮಾರ್ವಾಡಿ ಯುವಮಂಚ್ ಅಧ್ಯಕ್ಷ ಅಂಕಿತ್ ಮೋದಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕೆಂಬೋಡಿ ಸರ್ಕಾರಿ ಶಾಲೆ ಆವರಣದಲ್ಲಿ ವಡಗೂರು ಹಾಗೂ ಅಣ್ಣಿಹಳ್ಳಿ ಕ್ಲಸ್ಟರ್ ವ್ಯಾಪ್ತಿಯ ವಿವಿಧ ಸರ್ಕಾರಿ ಶಾಲೆಗಳ ಏಳುನೂರು ಮಕ್ಕಳಿಗೆ ಬೆಂಗಳೂರಿನ ಮಾರ್ವಾಡಿಯುವ ಮಂಚ್ ವತಿಯಿಂದ ಶಾಲಾ ಬ್ಯಾಗ್ ಹಾಗೂ ಲೇಖನ ಸಾಮಗ್ರಿ, ಶಾಲೆಗಳಿಗೆ ಸೀಲಿಂಗ್ ಫ್ಯಾನ್‌ಗಳನ್ನು ಕೊಡುಗೆಯಾಗಿ ವಿತರಿಸಿ ಅವರು ಮಾತನಾಡುತ್ತಿದ್ದರು.
ಸರ್ಕಾರಿ ಶಾಲೆಗಳಲ್ಲೂ ಅನೇಕ ಸಾಧಕರಿದ್ದಾರೆ, ಈ ದೇಶ ಮಹಾನ್ ವ್ಯಕ್ತಿಗಳೆಲ್ಲಾ ಸರ್ಕಾರಿ ಶಾಲೆಗಳಲ್ಲೇ ಓದಿದವರು ಎಂಬ ಸತ್ಯ ಅರಿಯಬೇಕಿದೆ, ಈ ಮಕ್ಕಳಿಳಿಗೆ ಗುಣಮಟ್ಟದ ಕಲಿಕೆ ಜತೆಗೆ ಅಗತ್ಯ ಸೌಲಭ್ಯ ಒದಗಿಸಿದ್ದೇ ಆದಲ್ಲಿ ನಮ್ಮ ದೇಶದ ಶೈಕ್ಷಣಿಕ ಪ್ರಗತಿ ವಿಶ್ವಕ್ಕೆ ಮಾದರಿಯಾಗುತ್ತದೆ ಎಂದರು.
ನಮ್ಮ ಸಂಸ್ಥೆ ಸರ್ಕಾರಿ ಶಾಲೆಗಳ ಬಡ ಮಕ್ಕಳಿಗೆ ನೆರವಾಗುವ ಸಂಕಲ್ಪದೊಂದಿಗೆ ಕೆಲಸ ಮಾಡುತ್ತಿದೆ, ಇಂತಹ ಕಾರ್ಯಕ್ಕೆ ಕೋಲಾರದ ಶಿಕ್ಷಕ ಗೆಳೆಯರ ಬಳಗ ಸಾಥ್ ನೀಡಿದ್ದು, ನಾವು ನೀಡಿದ್ದನ್ನು ಅತ್ಯಂತ ಪ್ರಾಮಾಣಿಕವಾಗಿ ಮಕ್ಕಳಿಗೆ ತಲುಪಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಖಾಸಗಿ ಸಂಸ್ಥೆಗಳಿಗಿಂತಲೂ ಸರ್ಕಾರಿ ಶಾಲೆಗಳಲ್ಲೇ ನುರಿತ ಶಿಕ್ಷಕರಿದ್ದಾರೆ, ಇಲ್ಲಿ ಬರುವ ಮಕ್ಕಳ ಕಲಿಕೆಗೆ ಬಡತನ ಅಡ್ಡಿಯಾಗಬಾರದು, ಈ ಮಕ್ಕಳು ದೇವರ ಸ್ವರೂಪವಾಗಿದ್ದು, ಇವರಿಗೆ ನೆರವಾದರೆ ಸಿಗುವ ಆತ್ಮತೃಪ್ತಿಗೆ ಬೇರಾವ ಸಂತೋಷವೂ ಸಮನಲ್ಲ ಎಂದರು.
ಯುವ ಮಂಚ್ ಕಾರ್ಯದರ್ಶಿ ಗೌರವ್‌ಶರ್ಮ ಮಾತನಾಡಿ, ಹಂಚಿ ತಿನ್ನುವ ಮನೋಭಾವ ಬಲಗೊಂಡರೆ ಖಂಡಿತಾ ಶೈಕ್ಷಣಿಕ ಪ್ರಗತಿಯ ಭವ್ಯ ಭಾರತ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.
ವಿವಿಧ ದಾನಿಗಳು, ಸಂಸ್ಥೆಗಳ ಸಹಕಾರದಿಂದ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಶಿಕ್ಷಕರ ಬಳಗ ಬದ್ದತೆಯಿಂದ ಕೆಲಸ ಮಾಡುತ್ತಿದೆ, ನೀಡಿದ ವಸ್ತುಗಳು ಮುಖ್ಯ ಫಲಾನುಭವಿಗಳಾದ ಮಕ್ಕಳಿಗೆ ತಲುಪಿಸುವ ನಿಟ್ಟಿನಲ್ಲಿ ಮುಖ್ಯ ಶಿಕ್ಷಕರುಗಳು ಯಾವುದೇ ಲೋಪವಾಗದಂತೆ ಎಚ್ಚರವಹಿಸಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಮಾರ್ವಾಡಿ ಯುವಮಂಚ್ ಖಜಾಂಚಿ ಪ್ರದೀಪ್ ಅಗರ್ವಾಲ್, ಜಯಪ್ರಕಾಶ್ ಅಗರ್ವಾಲ್ ಸುಶೀಲ್ ಶೈನಿ, ಶಿಕ್ಷಕ ಗೆಳೆಯರ ಬಳಗದ ಗೌರವಾಧ್ಯಕ್ಷ ಆರ್.ಶ್ರೀನಿವಾಸನ್, ಉಪಾಧ್ಯಕ್ಷ ವೀರಣ್ಣಗೌಡ, ಶಿಕ್ಷಣ ಸಂಯೋಜಕ ನಂಜುಂಡ ಗೌಡ , ಮುಖ್ಯ ಶಿಕ್ಷಕ ಬಿ.ಎಂ.ನಾರಾಯಣಸ್ವಾಮಿ, ಎಸ್‌ಡಿಎಂಸಿ ಅಧ್ಯಕ್ಷರು,ಸದಸ್ಯರು, ವಿವಿಧ ಶಾಲೆಗಳ ಶಿಕ್ಷಕರು ಉಪಸ್ಥಿತರಿದ್ದರು.