
ತಿ.ನರಸೀಪುರ: ಮಾ.08:- ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಪ್ರಸೂತಿ ವೈದ್ಯ ಡಾ.ನವೀನ್ ಎಂಬುವರ ಲಂಚದ ಅವತಾರ ವಿಪರೀತ ಹೆಚ್ಚಾಗಿದ್ದು,ಭ್ರಷ್ಟ ವೈದ್ಯನ ವಿರುದ್ಧ ಶೀಘ್ರ ಸೂಕ್ತಕ್ರಮ ಜರುಗಿಸಬೇಕು ಎಂದು ದಸಂಸ ಜಿಲ್ಲಾ ಸಂಚಾಲಕ ಸೋಸಲೆ ರಾಜಶೇಖರ್ ಒತ್ತಾಯಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಂದೆ ದಸಂಸ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಅವರು ಮಾತನಾಡಿ,ಪ್ರಸೂತಿ ವೈದ್ಯ ಡಾ.ನವೀನ ಹತ್ತಿರ ಹೆರಿಗೆಗಾಗಿ ಬರುವ ಗರ್ಭಿಣಿ ಮತ್ತು ಪೆÇೀಷಕರಿಗೆ ಭಯವನ್ನು ಸೃಷ್ಟಿಸಿ ಲಂಚ ಪಡೆಯುತ್ತಿರುವುದು ವಿಷಾದನೀಯ.ಹೆರಿಗೆಗಾಗಿ ಬರುವ ಮಹಿಳೆಯರಿಗೆ ಹೆರಿಗೆ ತುರ್ತು ಇದೆ,ಇಲ್ಲವಾದಲ್ಲಿ ತೊಂದರೆ ಆಗುತ್ತದೆ.ಇಲ್ಲವೇ ಮೈಸೂರಿಗೆ ರವಾನಿಸುತ್ತೇನೆ ಎಂದು ರೋಗಿಗಳನ್ನು ಭಯಭೀತಗೊಳಿಸುವ ಮೂಲಕ ದೊಡ್ಡ ಮೊತ್ತದ ಹಣಕ್ಕೆ ಬೇಡಿಕೆ ಇಡುತ್ತಾರೆ ಎಂಬ ಆರೋಪ ಕೇಳಿ ಬರುತ್ತಿದೆ ಎಂದರು.
ವೈದ್ಯನು ಆಸ್ಪತ್ರೆಯಲ್ಲಿ ಖಾಸಗಿ ಮಹಿಳೆಯೊಬ್ಬಳನ್ನು ಹಣದ ವಸೂಲಾತಿಗಾಗಿಯೇ ನೇಮಕ ಮಾಡಿಕೊಂಡಿದ್ದು,ಆ ಮಹಿಳೆ ಮುಖೇನ ಲಂಚದ ಹಣ ಪಡೆಯಲಾಗುತ್ತಿದೆ. ಈ ಬಗ್ಗೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಿಗೆ ವಿಷಯ ಗೊತ್ತಿದ್ದರೂ ಭ್ರಷ್ಟ ವೈದ್ಯನ ವಿರುದ್ಧ ಕ್ರಮಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದರು.
ಸರ್ಕಾರಿ ಆಸ್ಪತ್ರೆಯ ಪ್ರಸೂತಿ ವೈದ್ಯನ ಭ್ರಷ್ಟಾಚಾರದ ಬಗ್ಗೆ ಅವಳಿ ಕ್ಷೇತ್ರದ ಶಾಸಕರಾದ ಡಾ.ಯತೀಂದ್ರ ಸಿದ್ದರಾಮಯ್ಯ ಹಾಗೂ ಎಂ.ಅಶ್ವಿನ್ ಕುಮಾರ್ ಗೊತ್ತಿದ್ದರೂ ಲಂಚಬಾಕ ವೈದ್ಯನ ವಿರುದ್ಧ ಕ್ರಮವಹಿಸಲು ಮೀನಮೇಷ ಎಣಿಸುತ್ತಿದ್ದಾರೆ.ಅಲ್ಲದೆ ಈ ಬಗ್ಗೆ ಹಲವಾರು ತಾಲೂಕು ಮಟ್ಟದ ಸಭೆಗಳಲ್ಲಿ ಶಾಸಕದ್ವಯರಿಗೆ ಸಾರ್ವಜನಿಕರು ಅಹವಾಲು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.
ಅಲ್ಲದೆ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಎದುರಾಗಿದ್ದು,ಈಗಾಗಲೇ ಮೂರು ಜನ ವೈದ್ಯರು ವರ್ಗಾವಣೆಗೊಂಡಿರುತ್ತಾರೆ.
ಪ್ರತಿದಿನ ಸಾವಿರಕ್ಕೂ ಹೆಚ್ಚು ರೋಗಿಗಳು ಆಸ್ಪತ್ರೆಗೆ ಬರುತ್ತಿದ್ದು,ವೈದ್ಯರ ಕೊರತೆ ಉಂಟಾಗಿರುವುದರಿಂದ ರೋಗಿಗಳಿಗೆ ತುಂಬಾ ಸಮಸ್ಯೆಯಾಗಿದೆ.ಇ.ಎನ್.ಟಿ ವೈದ್ಯರ ಕೊರತೆಯಿದ್ದು ,ಸಂಬಂಧಿತ ಸಮಸ್ಯೆವುಳ್ಳವರು ಖಾಸಗಿ ಆಸ್ಪತ್ರೆಗಳಿಗೆ ದುಬಾರಿ ವೆಚ್ಚ ಭರಿಸಲಾಗದೆ ಖಾಯಿಲೆಯಿಂದ ನಿರಂತರ ನರಳುವಂತಾಗಿದೆ.ಹಾಗಾಗಿ ಅವಶ್ಯವಿರುವ ವೈದ್ಯರ ನೇಮಕ ಮಾಡಲು ಆಗ್ರಹ ಮಾಡಿದರು.
ಹಲವಾರು ವರ್ಷಗಳಿಂದ ದುರಸ್ತಿ ಹಂತದಲ್ಲಿರುವ ಶವಗಾರವನ್ನು ಆದಷ್ಟು ಬೇಗ ದುರಸ್ತಿಗೊಳಿಸಬೇಕು.ಆಸ್ಪತ್ರೆಯ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛತೆ ಮಾಡುವ ಬಗ್ಗೆ ಆಡಳಿತ ವೈದ್ಯಾಧಿಕಾರಿಗಳು ಹೆಚ್ಚು ಗಮನಹರಿಸುವಂತೆ ಒತ್ತಾಯಿಸಿದರು.ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಜಗನ್ನಾಥ್ ಪ್ರತಿಭಟನಾ ನಿರತರಿಂದ ಮನವಿ ಪತ್ರ ಸ್ವೀಕರಿಸಿದರು.
ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಸಂಚಾಲಕ ಕುಂತನಹಳ್ಳಿ ರಾಮಯ್ಯ ,ತಾಲೂಕು ಸಂಚಾಲಕ ಬೆನಕನಹಳ್ಳಿ ಸುನಿಲ್, ಜಿಲ್ಲಾ ಉಪವಿಭಾಗದ ಬೆಟ್ಟಹಳ್ಳಿ ಕೆಂಪರಾಜು,ತಾಲೂಕು ಸಂಚಾಲಕರಾದ ಬೆನಕನಹಳ್ಳಿ ಸಹನಾ,ಕುಂತನಹಳ್ಳಿ ಜನಾರ್ಧನ್ ,ಪುಟ್ಟಮಣಿ ,ಪುಟ್ಟಸ್ವಾಮಿ ,ಶಾಂತರಾಜು, ಮಹೇಂದ್ರ ,ಜನ್ನೂರು ಗಂಗಾಧರ್ ,ಸರ್ಕಲ್ ಇನ್ಸ್ಪೆಕ್ಟರ್ ಮಹೇಶ್, ಆಸ್ಪತ್ರೆ ಅಧೀಕ್ಷಕ ಡೆನ್ನಿಸ್, ಉಮೇಶ್ ಇತರರು ಹಾಜರಿದ್ದರು.