ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಒತ್ತಾಯ

ದಾವಣಗೆರೆ. ಏ.೨೭; ಜಿಲ್ಲೆಗೆ ಹೊಸದಾಗಿ ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಿಸಬೇಕೆಂದು ವಿಶ್ವೇಶ್ವರಯ್ಯ ಜಲನಿಗಮ ಭದ್ರಾ ಮೇಲ್ದಂಡೆ ಸಮಿತಿಯ ಸದಸ್ಯ ಕೆ.ಬಿ ಕಲ್ಲೇರುದ್ರೇಶ್ ಒತ್ತಾಯಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ದಾವಣಗೆರೆ ಕೇಂದ್ರ ಭಾಗದಲ್ಲಿದ್ದು ಎಲ್ಲಾ ಮೂಲಭೂತ ಸೌಕರ್ಯಗಳನ್ನು ಹೊಂದಿದೆ.ಕೇಂದ್ರ ಸರ್ಕಾರವೂ ಸಹ ಇತ್ತೀಚೆಗೆ ೫೦೦ ಕ್ಕೂ ಹೆಚ್ಚು ಮೆಡಿಕಲ್ ಕಾಲೇಜುಗಳನ್ನು ಪ್ರಾರಂಭಿಸುವುದಾಗಿ ಬಜೆಟ್ ನಲ್ಲಿ ಘೋಷಿಸಿದೆ.ಆದ್ದರಿಂದ ದಾವಣಗೆರೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಿಸುವುದು ಒಳ್ಳೆಯದು. ಈಗಿರುವ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಸಾಕಷ್ಟು ರೋಗಿಗಳು ಆಗಮಿಸುತ್ತಿದ್ದಾರೆ. ದಾವಣಗೆರೆಯಲ್ಲಿ ಸರ್ಕಾರಿ ಕಾಲೇಜು ಆರಂಭವಾದರೆ ಪ್ರಸ್ತುತ ಇರುವ ಜಿಲ್ಲಾಸ್ಪತ್ರೆಗಳು ಉನ್ನತಮಟ್ಟದ ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ. ಒಂದು ಕಾಲದಲ್ಲಿ ದಾವಣಗೆರೆಯಲ್ಲಿ ಸಾಕಷ್ಟು ಕಾರ್ಮಿಕರು ಇದ್ದಾರೆ ಎಂಬ ಹೆಸರಿತ್ತು.ಬೆಂಗಳೂರು ಬಿಟ್ಟರೆ ದಾವಣಗೆರೆಯಲ್ಲಿಯೇ ಅತ್ಯಧಿಕ ಕಾರ್ಮಿಕರಿದ್ದಾರೆ.ಆದ್ದರಿಂದ ಕಾರ್ಮಿಕ ಇಲಾಖೆಯ ಅಧೀನದಲ್ಲಿವೈದ್ಯಕೀಯ ಕಾಲೇಜು ಪ್ರಾರಂಭಿಸಬೇಕು.ಈಗಾಗಲೇ ಗುಲ್ಬರ್ಗಾ, ಬೆಂಗಳೂರಿನಲ್ಲಿ ಇರುವಂತೆ ಇಲ್ಲಿಯೂ ಕಾರ್ಯಾರಂಭ ಮಾಡಿದರೆ ಬಡವರಿಗೆ ಅನುಕೂಲವಾಗಲಿದೆ.ಆದರೆ ರಾಜಕೀಯ ಇಚ್ಚಾಶಕ್ತಿಯ ಕೊರತೆಯಿಂದ ಇದುವರೆಗೂ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭವಾಗಿಲ್ಲ.ಯಾವುದೇ ಯೊಜನೆಗಳಲ್ಲಿ ರಾಜಕೀಯ ಬೆರೆತರೆ ಅಂತಹ ಯೋಜನೆಗಳು ಕುಂಠಿತವಾಗುತ್ತದೆ.ಜನಪ್ರತಿನಿಧಿಗಳು ಈ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಒತ್ತಾಯಿಸಿದರು.