ಸರ್ಕಾರಿ ವಾಹನಗಳ ದುರ್ಬಳಕೆ ತಡೆಗಟ್ಟಿ- ಆರೋಪ

ಗಬ್ಬೂರು.ಸೆ.೨೦-ದೇವದುರ್ಗ ತಾಲೂಕಿನಲ್ಲಿನ ವಿವಿಧ ಇಲಾಖೆ ಅಧಿಕಾರಿಗಳು ಸರ್ಕಾರಿ ವಾಹನಗಳನ್ನು ದುರುಪಯೋಗ ಪಡಿಸಿಕೊಳುತ್ತಿದ್ದಾರೆಂದು ಆರೋಪಿಸಿ ಸಾರ್ವಜನಿಕರು ಅನೇಕ ದೂರುಗಳನ್ನು ನೀಡಿದ್ದು, ಅಂಥ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ತಾಲೂಕು ಜೆಡಿಎಸ್ ಯುವ ಮುಖಂಡ ಮಲ್ಲು ಕೊತ್ತದೊಡ್ಡಿ ಗಂಭೀರವಾಗಿ ಆರೋಪಿಸಿದ್ದಾರೆ.
ಕೇಂದ್ರ ಸ್ಥಾನದಲ್ಲಿದ್ದುಕೊಂಡು ಕೆಲಸ ಮಾಡಬೇಕೆಂಬ ಸರ್ಕಾರದ ಮಾರ್ಗದರ್ಶನ ಇದ್ದರೂ ಅಧಿಕಾರಿಗಳು ರಾಯಚೂರು, ಹಾಗೂ ಇತರೆ ಮಹಾನಗರಗಳಲ್ಲಿ ವಾಸಿಸುತ್ತಿರುವುದು ಕಂಡು ಬಂದಿದೆ.ದಿನನಿತ್ಯದ ಕಛೇರಿ ಕೆಲಸಕ್ಕೆ ಬರುವಾಗ ಮತ್ತು ಮರಳುವಾಗ ಸರ್ಕಾರಿ ವಾಹನಗಳನ್ನೇ ಬಳಸುತ್ತಿದ್ದಾರೆ.ಇದರಿಂದ ಸರ್ಕಾರಕ್ಕೆ ಆರ್ಥಿಕ ಹೊರೆಯಾಗುವುದಲ್ಲದೇ ಸಮಯಕ್ಕೆ ಸರಿಯಾಗಿ ಕಚೇರಿ ಕೆಲಸಗಳು ನಡೆಯುವುದಿಲ್ಲ.ಹೆಚ್ಚಿನ ಇಂಧನ ಬಳಕೆಯಾಗಿ ದೇಶದ ಆರ್ಥಿಕ ಪರಿಸ್ಥಿತಿ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.ಕೆಲಸದ ಸಮಯದಲ್ಲಿ ಮಾತ್ರ ವಾಹನ ಬಳಸಬೇಕು,ಕೆಲಸ ಮುಗಿದ ತಕ್ಷಣ ವಾಹನವನ್ನು ಕಛೇರಿಯಲ್ಲಿಯೇ ಬಿಟ್ಟು ಹೋಗಬೇಕೆಂಬ ಸೂಚನೆಯನ್ನು ಕಡ್ಡಾಯಗೊಳಿಸಬೇಕು.
ಅನಿವಾರ್ಯ ಕಾರಣ ಬಂದಾಗ ಮೇಲಧಿಕಾರಿಗಳ ಅಧಿಕೃತ ಹಾಗೂ ಲಿಖಿತ ಪರವಾನಗಿ ಪಡೆದುಕೊಳ್ಳುವಂತಾಗಬೇಕು.ಕಾರಣ ತಾವು ಅಂತಹ ಅಧಿಕಾರಿಗಳನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.ಇಲ್ಲವಾದಲ್ಲಿ ಅಧಿಕಾರಿಗಳು ಸರ್ಕಾರಿ ವಾಹನವನ್ನು ದುರುಪಯೋಗ ಪಡಿಸಿಕೊಳ್ಳುವ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತರೇ ಅಂತಹ ವಾಹನಗಳನ್ನು ತಡೆದು ಪೋಲಿಸ್ ಇಲಾಖೆಗೆ ಒಪ್ಪಿಸಬೇಕಾಗುತ್ತದೆ.
ಈ ಕುರಿತು ಹೆಚ್ಚಿನ ಅನಾಹುತಕ್ಕೆ ಆಸ್ಪದ ಕೊಡದೇ ಕೂಡಲೇ ಅಧಿಕಾರಿಗಳ ಸಭೆ ಕರೆದು ಮಾರ್ಗದರ್ಶನ ಮಾಡಬೇಕೆಂದು ಜಿಲ್ಲಾಧಿಕಾರಿ ಅವರಿಗೆ ಒತ್ತಾಯಿಸಿದ್ದಾರೆ.