ಸರ್ಕಾರಿ ವಸತಿಗೃಹಗಳಿಗೆ ಭೇಟಿ, ತಪಾಸಣೆ

ಚಾಮರಾಜನಗರ, ಅ.18: ಜಿಲ್ಲಾಧಿಕಾರಿಗಳು ಹಾಗೂ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಬರುವ ವಸತಿ ಗೃಹಗಳ ಸಂಪೂರ್ಣ ಕ್ರೂಡೀಕೃತ ಮಾಹಿತಿಯನ್ನು ಸಂಗ್ರಹಿಸುವ ಕಾರ್ಯ ಇಂದಿನಿಂದ ಆರಂಭವಾಗಿದ್ದು, ಜಿಲ್ಲಾ ನಗರಾಭಿವೃದ್ದಿ ಯೋಜನಾ ನಿರ್ದೇಶಕ ಕೆ. ಸುರೇಶ್ ನೇತೃತ್ವದ ತಂಡ ವಸತಿ ಗೃಹಗಳಿಗೆ ತೆರಳಿ ಅಲ್ಲಿ ವಾಸವಿರುವ ಕುಟುಂಬಗಳ ಸಂಪೂರ್ಣ ಮಾಹಿತಿ ಪಡೆದುಕೊಂಡರು.
ನಗರದ ಜಿಲ್ಲಾ ಕೇಂದ್ರದಲ್ಲಿರುವ ಜಿಲ್ಲಾಧಿಕಾರಿಗಳ ವ್ಯಾಪ್ತಿಯಲ್ಲಿ 108 ವಸತಿ ಗೃಹಗಳು ಹಾಗೂ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿ 78 ವಸತಿಗಳಿದ್ದು, ಇಲ್ಲಿ ವಾಸಿಸುವ ನೌಕರರ ಪೂರ್ಣ ಮಾಹಿತಿ ಸಂಗ್ರಹಿಸುವ ಸಲುವಾಗಿ ಜಿಲ್ಲಾಧಿಕಾರಿ ಡಾ|| ಎಂ.ಆರ್. ರವಿ ಒಂದು ಸಮಿತಿಯನ್ನು ರಚನೆ ಮಾಡಿದ್ದು, ಒಂದು ವಾರದಲ್ಲಿ ವರದಿ ನೀಡುವಂತೆ ಸೂಚನೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಇಂದು ಜಿಲ್ಲಾ ನಗರಾಭಿವೃದ್ದಿ ಯೋಜನಾ ನಿರ್ದೇಶಕ ಕೆ. ಸುರೇಶ್, ಖಾಧಿ ಮತ್ತು ಗ್ರಾಮೋದ್ಯೋಗ ಇಲಾಖೆಯ ಉಪ ನಿರ್ದೇಶಕ ರಾಜೇಂದ್ರಪ್ರಸಾದ್, ನಗರಸಭೆ ಕಿರಿಯ ಆರೋಗ್ಯ ಅಧಿಕಾರಿ ಶಿವಪ್ರಸಾದ್, ಪಿಡ್ಲುಬ್ಯೂಡಿ ಇಲಾಖೆಯ ವಿಷಯ ನಿರ್ವಾಹಕ ನಂಜುಂಡ ಅವರನ್ನೋಳಗೊಂಡ ತಂಡ ವಸತಿ ಗೃಹಗಳಿಗೆ ತೆರಳಿ ತಪಾಸಣೆ ಮಾಡಿದರು.
ಈ ವಸತಿ ಗೃಹಗಳಲ್ಲಿ ಅನಧಿಕೃತವಾಗಿ ಜಿಲ್ಲಾ ಕೇಂದ್ರದಲ್ಲಿ ಇಲ್ಲದ ನೌಕರರು, ಹಾಗೂ ಕೊರೊನಾ ವಾರಿರ್ಯಸ್ ಅಲ್ಲದವರು, ನಿವೃತ್ತಿ ಹೊಂದಿ ಬಹಳ ವರ್ಷಗಳೇ ಕಳೆದಿದ್ದು ವಸತಿ ಗೃಹ ಖಾಲಿ ಮಾಡದೇ ಇರುವುದು. ಸ್ವಂತ ಮನೆ ಹೊಂದಿದ್ದು, ಅದನ್ನು ಬಾಡಿಗೆಗೆ ನೀಡಿ, ಸರ್ಕಾರಿ ವಸತಿ ಗೃಹದಲ್ಲಿಯೇ ವಾಸಿಸುತ್ತಿರುವುದು. ವಸತಿ ಗೃಹಗಳನ್ನು ಪಡೆದುಕೊಂಡು ಮತ್ತೊಬ್ಬರಿಗೆ ಉಪ ಬಾಡಿಗೆಗೆ ನೀಡಿರುವುದು ಕಂಡು ಬಂತು.
ತನಿಖಾಧಿಕಾರಿಗಳ ತಂಡ ಸಿ. 49ಜಿಎಫ್ ವಸತಿಗೆ ಭೇಟಿ ನೀಡಿದಾಗ ಶಿಕ್ಷಕ ಗೋವಿಂದರಾಜು ಹೆಸರಿನಲ್ಲಿ ವಸತಿ ಗೃಹ ಹಂಚಿಕೆಯಾಗಿದ್ದು, ಇವರು ಗುಂಡ್ಲುಪೇಟೆ ತಾಲ್ಲೂಕುಗೆ ಒಂದು ವರ್ಷದ ಹಿಂದೆಯೇ ವರ್ಗಾವಣೆಗೊಂಡಿದ್ದಾರೆ. ಈ ವಸತಿ ಗೃಹದಲ್ಲಿ ಸ್ವಂತ ಮನೆಯನ್ನು ಹೊಂದಿರುವ ಮತ್ತೋಬ್ಬ ಶಿಕ್ಷಕ ದಂಪತಿಗಳು ಅನಧಿಕೃತವಾಗಿ ವಾಸವಿರುವುದು ಕಂಡು ಬಂತು. ಆಯುಷ್ ವೈದ್ಯಾಧಿಕಾರಿ ಗುಂಡ್ಲುಪೇಟೆ ತಾಲೂಕಿನ ಕುಂದುಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆಗೊಂಡಿದ್ದು, ಈ ವಸತಿ ಗೃಹ ಕೋರೋನಾ ವಾರಿರ್ಯಸ್ ಆಗಿರುವ ನಗರಸಭೆಯ ಕಿರಿಯ ಆರೋಗ್ಯಾಧಿಕಾರಿ ಮಂಜು ಅವರಿಗೆ ಹಂಚಿಕೆಯಾಗಿದ್ದು, ವಸತಿಗೃಹ ಖಾಲಿ ಮಾಡದೇ ಬೀಗ ಹಾಕಿಕೊಂಡಿರುವುದು ಕಂಡು ಬಂತು