ಸರ್ಕಾರಿ ಯೋಜನೆಗಳಡಿ ಸಾಲ ಮಂಜೂರಾತಿಗೆ ಸಿಬಿಲ್ ಸ್ಕೋರ್ ಪರಿಗಣಿಸಬೇಡಿ


ಸಂಜೆವಾಣಿ ವಾರ್ತೆ
 ಚಿತ್ರದುರ್ಗ.ಅ.೧೭; ಸರ್ಕಾರದ ವಿವಿಧ ಯೋಜನೆಗಳಡಿ ಸಾಲ ಮಂಜೂರಾತಿಗೆ ಬ್ಯಾಂಕುಗಳು ಸಿಬಿಲ್ ಸ್ಕೋರ್ ಪರಿಗಣಿಸಬಾರದು. ಹಾಲು ಉತ್ಪಾದಕ ಸಂಘಗಳ ಸಹಯೋಗದಲ್ಲಿ ಹಸು ಸಾಕಾಣಿಕೆಗೆ, ಸಣ್ಣ ಘಟಕಗಳ ಆಧಾರದಲ್ಲಿ ಪಾರಂಪರಿಕವಾಗಿ ಕುರಿ ಸಾಕಾಣಿಕೆ ಮಾಡಿಕೊಂಡು ಬಂದ ಸಮುದಾಯಗಳಿಗೆ ರಿಯಾಯಿತಿ ಬಡ್ಡಿದರದಲ್ಲಿ ಸಾಲ ಒದಗಿಸುವಂತೆ ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆ ರಾಜ್ಯ ಖಾತೆ ಸಚಿವ ಎ.ನಾರಾಯಣಸ್ವಾಮಿ ಹೇಳಿದರು. ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ, ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಅಡಿ ಕಾರ್ಯನಿರ್ವಹಿಸುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಸಫಾಯಿ ಕರ್ಮಚಾರಿ ಹಾಗೂ ದಿವ್ಯಾಂಗರ ರಾಷ್ಟ್ರೀಯ ಹಣಕಾಸು ಹಾಗೂ ಅಭಿವೃದ್ಧಿ ನಿಗಮಗಳ ಅನುದಾನದಡಿ, ನೀಡುವ ಸಾಲ ಸೌಲಭ್ಯ ಯೋಜನೆಗಳ ಅನುಷ್ಠಾನದ ಕುರಿತು, ಚಿತ್ರದುರ್ಗ, ತುಮಕೂರು, ದಾವಣಗೆರೆ ಜಿಲ್ಲೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.ಸಾಮಾಜಿಕವಾಗಿ ಹಿಂದುಳಿದವರು ಸ್ವಂತ ಉದ್ಯೋಗ ಕೈಗೊಂಡು ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುವಂತೆ, ಕೇಂದ್ರ ಸರ್ಕಾರ ಹಲವು ನಿಗಮಗಳನ್ನು ಸ್ಥಾಪಿಸಿ, ಬ್ಯಾಂಕುಗಳ ಮೂಲಕ ಫಲಾನುಭವಿಗಳಿಗೆ ರಿಯಾಯಿತಿ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡುವ ಯೋಜನೆ ಜಾರಿಗೊಳಿಸಿದೆ. ಆದರೆ ಬ್ಯಾಂಕ್‍ಗಳು ಈ ಸೌಲಭ್ಯದ ಕುರಿತು ಸಾರ್ವಜನಿಕರಿಗೆ ಯಾವುದೇ ಮಾಹಿತಿ ಸಮರ್ಪಕವಾಗಿ ನೀಡುತ್ತಿಲ್ಲ.  ನಿಗಮಗಳು ಬ್ಯಾಂಕ್‍ಗಳಲ್ಲಿ ಠೇವಣಿ ಇರಿಸಿದ ಹಣದ ಬಳಕೆಯೇ ಆಗಿಲ್ಲ. ಸಿಬಿಲ್ ಸ್ಕೋರ್, ಸಾಲ ಮರುಪಾವತಿ ಅರ್ಹತೆ ಮುಂತಾದ ನೆಪಗಳನ್ನು ಹೇಳಿ ಸಾಲ ಸೌಲಭ್ಯಕ್ಕೆ ಸಲ್ಲಿದ ಅರ್ಜಿಯನ್ನು ಬ್ಯಾಂಕುಗಳಿಂದ ತಿರಸ್ಕರಿಸಲಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ ಎಂಬುದಾಗಿ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಅಸಮಾಧಾನ ವ್ಯಕ್ತ ಪಡಿಸಿದರು.