ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಲು ಒತ್ತಾಯ

ಕಲಬುರಗಿ,ಮಾ.4-ನಗರದ ಹೈಕೋರ್ಟ್ ಬಳಿಯ ಗ್ರೀನ್ ಪಾರ್ಕ್‍ನಲ್ಲಿರುವ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ದಲಿತ ಸೇನೆಯ ಉಪಾಧ್ಯಕ್ಷ ಕಪಿಲ ವಾಲಿ ನೇತೃತ್ವದಲ್ಲಿ ವಿಧ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಖಾಲಿ ಬಕೇಟ್ ಹಿಡಿದು ವಿನೂತನವಾಗಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಕಳೆದ ಮೂರು ದಿನಗಳಿಂದ ಹಾಸ್ಟೆಲ್‍ನಲ್ಲಿ ನೀರು ಬಾರದೇ ಇದ್ದರೂ ತೆಲೆ ಕೆಡಿಸಿಕೊಳ್ಳದ ವಸತಿ ನಿಲಯದ ಆಡಳಿತ ಮಂಡಳಿಯ ವಿರುದ್ದ ಕಿಡಿಕಾರಿದರು.
ವಸತಿ ನಿಲಯಕ್ಕೆ ಸೇರಿಕೊಂಡಾಗಿನಿಂದಲೂ ಪ್ರತಿನಿತ್ಯ ಒಂದಲ್ಲ ಒಂದು ಸಮಸ್ಯೆಗಳನ್ನ ಎದುರಿಸುತ್ತಲೇ ಇದ್ದೇವೆ. ಕಳೆದ ಮೂರು ದಿನಗಳಿಂದ ನೀರಿನ ಸಮಸ್ಯೆ ಎದುರಾದರೂ ಸಹ ಇಲ್ಲಿನ ಅಧಿಕಾರಿ ಕಿಂಚಿತ್ತೂ ತೆಲೆ ಕಡೆಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದರು. ಅಷ್ಟೆ ಅಲ್ಲ, ನಗರದ ಹೊರವಲಯದಲ್ಲಿರುವ ವಸತಿ ನಿಲಯಕ್ಕೆ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲ. ವಸತಿ ನಿಲಯದಲ್ಲಿ ಸರಿಯಾದ ಸಮಯಕ್ಕೆ ಊಟ ಸಹ ನೀಡುವುದಿಲ್ಲ. ಕೆಲವೊಂದು ಬಾರಿ ಕಾಲೇಜಿಗೆ ಉಪವಾಸವೆ ಹೋಗಿದ್ದೆವೆ. ಈ ಬಗ್ಗೆ ಪ್ರಶ್ನಿಸಿದರೆ ಅಧಿಕಾರಿಗಳು ಒಂದಿಲ್ಲೊಂದು ಕುಂಟು ನೆಪÀ ಹೇಳುತ್ತಾರೆ ಎಂದು ವಿದ್ಯಾರ್ಥಿಗಳು ದೂರಿದರು.
ವಿದ್ಯಾರ್ಥಿಗಳು ಪ್ರತಿಭಟನೆಗೆ ಇಳಿಯುತ್ತಿದ್ದಂತೆ ಹಾಸ್ಟೆಲ್‍ನತ್ತ ಧಾವಿಸಿದ ಅಧಿಕಾರಿಗಳು ವಸತಿ ನಿಲಯದಲ್ಲಿರುವ ಸಮಸ್ಯೆಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದಷ್ಟು ಬೇಗ ಸರಿಪಡಿಸಲೂ ಅಧಿಕಾರಿಗಳು ಸಹ ಸೂಚನೆಯನ್ನು ನೀಡಿದ್ದಾರೆ. ಕುಡಿಯುವ ನೀರಿನ ಸಮಸ್ಯೆ, ಊಟದ ವ್ಯವಸ್ಥೆ ಎಲ್ಲವೂ ಕೂಡ ಅತಿ ಶೀಘ್ರದಲ್ಲಿ ಸರಿಪಡಿಸಲಾಗುವುದು ಎಂದು ಹಾಸ್ಟಲ್ ವಾರ್ಡನ್ ಮರೆಪ್ಪ ಚಲವಾದಿ ಭರವಸೆಯನ್ನ ನೀಡಿದರು.
ದಲಿತ ಸೇನೆಯ ಉಪಾಧ್ಯಕ್ಷ ಕಪಿಲ್ ವಾಲಿ, ದಲಿತ ಸೇನೆಯ ವಿಧ್ಯಾರ್ಥಿ ಘಟಕದ ರಾಜ್ಯಧ್ಯಕ್ಷ ಶಿವಲಿಂಗಪ್ಪ ದೊಡ್ಡಮನಿ ವಸತಿ ನಿಲಯದ ವಾರ್ಡನ್ ಅವರಿಗೆ ಮನವಿಪತ್ರ ಸಲ್ಲಿಸಿದರು.
ವಿದ್ಯಾರ್ಥಿಗಳಾದ ದಿಲೀಪ್, ಆಕಾಶ್, ಮಂಜುನಾಥ್, ಧೃತರಾಷ್ಟ್ರ, ಪ್ರಕಾಶ್, ಕೃಷ್ಣ ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಇದ್ದರು.