ಸರ್ಕಾರಿ ಮಹಿಳಾ ಕಾಲೇಜು : ಇರುವುದೊಂದೇ ಭೂಮಿ ಅಭಿಯಾನ

ರಾಯಚೂರು.ಜು.೨೭- ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕವು ಸ್ವತಂತ್ರೋತ್ಸವದ ಅಮೃತ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಮಣ್ಣು, ಜಲ, ಭೂಮಿ, ಸಸ್ಯ ಸಂಪತ್ತು, ಅರಣ್ಯಗಳು, ನವೀಕರಿಸಲಾಗದ ಇಂಧನ ಮೂಲಗಳು ಮತ್ತು ಫಲವತ್ತಾದ ಭೂಮಿಯ ಸಂರಕ್ಷಣೆಗಳನ್ನೊಳಗೊಂಡಂತೆ ಪರಿಸರದ ಸಮಗ್ರ ಅಭಿವೃದ್ಧಿಗೆ ಮುಂದಾಗಿದ್ದು ಅದಕ್ಕಾಗಿ ಇರುವುದೊಂದೇ ಭೂಮಿ ಎಂಬ ಅಭಿಯಾನವನ್ನು ಹಮ್ಮಿಕೊಂಡಿದೆ.
ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಕಾರ್ಯಕ್ರಮದ ರೂಪುರೇಶೆಗಳು, ಗುರಿ ಮತ್ತು ಉದ್ದೇಶಗಳನ್ನು ಪರಿಚಯಿಸುತ್ತಾ ಪ್ರಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಕಾರ್ಯಕ್ರಮ ಅಧಿಕಾರಿಯಾದ ಡಾ. ಸಂತೋಷ ಕುಮಾರ್ ರೇವೂರ್ ರವರು ಕಾಲೇಜಿನ ವಿದ್ಯಾರ್ಥಿನಿಯರು ಬಾನುಲಿಯಲ್ಲಿ ಪ್ರಸಾರವಾಗುವ ಇರುವುದೊಂದೇ ಭೂಮಿ ಎಂಬ ಕಾರ್ಯಕ್ರಮದಿಂದ ಪ್ರೇರಿತಗೊಂಡು ಸ್ವಯಂ ಪ್ರೇರಣೆಯಿಂದ ಈ ಒಂದು ಅಭಿಯಾನವನ್ನು ಕೈಗೊಳ್ಳಲು ಮುಂದಾಗಿದ್ದಾರೆ.
ಅಭಿಯಾನದಲ್ಲಿ ಪರಿಸರದ ಸಮಗ್ರ ಅಭಿವೃದ್ಧಿಗೆ ಪೂರಕವಾಗುವಂತೆ ವ್ಯರ್ಥ ಪ್ಲಾಸ್ಟಿಕ್ ಪ್ಯಾಕೆಟ್ ಮತ್ತು ಚೀಲಗಳ ಸಂಗ್ರಹಣೆ ಮತ್ತು ಮರುಬಳಕೆ, ಬೀಜದುಂಡೆಗಳ ತಯಾರಿಕೆ, ಸಸಿಗಳನ್ನು ಬೆಳೆಸುವುದು, ದತ್ತು ಗ್ರಾಮವಾದ ಬಾಯಿದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾಗೂ ವಡವಟ್ಟಿ ಗ್ರಾಮದಲ್ಲಿ ಸಸ್ಯಗಳನ್ನು ನೆಡುವ ಮೂಲಕ ಹಸರೀಕರಣ ಮಾಡುವುದು ಸೇರಿದಂತೆ ಮಣ್ಣು, ನೀರು, ಮರಗಳ ಸಂರಕ್ಷಣೆ ಹಾಗೂ ಪ್ಲಾಸ್ಟಿಕ್ ನ ಮರುಬಳಕೆಯ ಕುರಿತಾದ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪರಿಣಾಮಕಾರಿಯಾದ ಚಟುವಟಿಕೆಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದರು.
ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಸನ್ನಕುಮಾರ್ ರವರು ಬಾನುಲಿಯಲ್ಲಿ ಪ್ರಸಾರವಾದ ಕಾರ್ಯಕ್ರಮವೊಂದರಿಂದ ಪ್ರಭಾವಿತಗೊಂಡು ಸ್ವಯಂ ಪ್ರೇರಿತರಾಗಿ ಪರಿಸರದ ಸಮಗ್ರ ಅಭಿವೃದ್ಧಿಗಾಗಿ ವಿವಿಧ ಚಟುವಟಿಕೆಗಳ ಮೂಲಕ ಶ್ರಮವಹಿಸುವುದಕ್ಕೆ ಮುಂದಾಗಿರುವ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸ್ವಯಂ ಸೇವಕಿಯರ ಮತ್ತು ವಿದ್ಯಾರ್ಥಿನಿಯರ ಕಾರ್ಯವು ಶ್ಲಾಘನೀಯವಾದದ್ದು.
ಸಮಾಜಮುಖಿ ಕಾರ್ಯಗಳಲ್ಲಿ ಮತ್ತು ರಾಷ್ಟ್ರಸೇವೆಯ ವಿಷಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯು ಯಾವತ್ತೂ ಮಹತ್ವದ ಮತ್ತು ಗುರುತರವಾದ ಪಾತ್ರವನ್ನು ವಹಿಸಿದೆ. ಯುವಶಕ್ತಿಯ ಸಂಗಮವಾಗಿರುವ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕಿಯರು ಮತ್ತು ಕಾಲೇಜಿನ ಎಲ್ಲ ವಿದ್ಯಾರ್ಥಿನಿಯರು ತಮ್ಮ ದಿನನಿತ್ಯದ ವಿದ್ಯಾರ್ಜನೆಯೊಂದಿಗೆ ನಾವು ಬದುಕುವ ಸಮಾಜ ಮತ್ತು ಅಸ್ತಿತ್ವವನ್ನು ನೀಡಿರುವ ರಾಷ್ಟ್ರದ ಪ್ರಗತಿಗಾಗಿಯೂ ಸಹ ಶ್ರಮಿಸುವುದು ಆದ್ಯ ಕರ್ತವ್ಯವೆಂದು ತಿಳಿಯಬೇಕು. ಭಾರತ ಯುವ ರಾಷ್ಟ್ರವಾಗಿದ್ದು ದೇಶದ ಆಂತರಿಕ ಮತ್ತು ಬಾಹ್ಯ ಪ್ರಗತಿಯು ಯುವಜನತೆಯ ಸಕಾರಾತ್ಮಕ ಶ್ರಮವನ್ನು ಅವಲಂಬಿಸಿದೆ.
ಆ ನಿಟ್ಟಿನಲ್ಲಿ ಇಂದು ಕಾಲೇಜಿನ ಎಲ್ಲ ವಿದ್ಯಾರ್ಥಿನಿಯರು ಪರಿಸರದ ಸಮಗ್ರ ಅಭಿವೃದ್ಧಿಗಾಗಿ ಕೈಗೊಳ್ಳಲು ನಿರ್ಧರಿಸುವ ಚಟುವಟಿಕೆಗಳು ನಿಜಕ್ಕೂ ಉತ್ತಮ ಸಮಾಜದ ನಿರ್ಮಾಣದಲ್ಲಿ ಮಹತ್ವದ ಕೊಡುಗೆಯಾಗಲಿದೆ. ಅಭಿಯಾನದ ಯಶಸ್ವಿ ಅನುಷ್ಠಾನಕ್ಕಾಗಿ ಸರ್ಕಾರದ ಅರಣ್ಯ ಇಲಾಖೆಯ ಮಾರ್ಗದರ್ಶನ ಮತ್ತು ಬಾಯಿದೊಡ್ಡಿ ಗ್ರಾಮ ಪಂಚಾಯತಿಯ ಸಹಕಾರ ಪಡೆದುಕೊಂಡಿರುವುದು ನಿಮ್ಮೆಲ್ಲರ ಇಚ್ಛಾ ಸಾಮರ್ಥ್ಯವನ್ನು ಸಾಬೀತುಪಡಿಸಿದೆ.
ವಿದ್ಯಾರ್ಥಿನಿಯರ ಇಂತಹ ಅಮೋಘ ಕಾರ್ಯಗಳಿಗೆ ಕಾಲೇಜಿನ ಸರ್ವ ಸಿಬ್ಬಂದಿ ಯಾವತ್ತೂ ಬೆಂಬಲವಾಗಿ ನಿಲ್ಲುವೆವು ಎಂದು ಹೇಳಿ ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿಯವರ ನೇತೃತ್ವದಲ್ಲಿ ಅಭಿಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಂತೆ ಕರೆ ಕೊಟ್ಟರು.
ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಎನ್‌ಎಸ್‌ಎಸ್ ನ ಸ್ವಯಂ ಸೇವಕಿಯರು ಕಾರ್ಯಕ್ರಮವನ್ನು ಸಂಘಟಿಸಿ ನಿರ್ವಹಿಸಿದರು.