ಸರ್ಕಾರಿ ಬಸ್ಸು ಕೆಸರಿನಲ್ಲಿ ಸಿಕ್ಕಿಕೊಂಡು ಫಜೀತಿ ”


ಸಂಜೆವಾಣಿ ವಾರ್ತೆ
ಸಿರಿಗೇರಿ ಸೆ9. ಸಮೀಪದ ಹಾಗಲೂರು ಗ್ರಾಮದ ಮುಖ್ಯ ರಸ್ತೆಯಲ್ಲಿ ಸೆ.6ರಂದು ಸಿರುಗುಪ್ಪ ಮೋಕ ಮಾರ್ಗದ ಸರ್ಕಾರಿ ಬಸ್ಸು ಕೆಸರಿನಲ್ಲಿ ಸಿಕ್ಕಿಕೊಂಡು ಫಜೀತಿ ಅನುಭವಿಸುವಂತಾಗಿತ್ತು. ಗ್ರಾಮದ ನಾಯಕರ ಓಣಿ ಹತ್ತಿರ, ರೈತರ ಕಟ್ಟೆ ಹತ್ತಿರ ಹಾದು ಹೋಗುವ ಮೋಕಾ ರಸ್ತೆಯಲ್ಲಿ ನಾಲು ಬಿದ್ದು, ರಸ್ತೆಯ ಪಕ್ಕದಲ್ಲಿಯೇ ಹಾದುಹೋಗಿರುವ ರೈತರ ಹೊಲಗಳ ಪೈಪ್‍ಲೈನ್ ಲೀಕೆಜನಿಂದಾಗಿ ನೀರು ಹರಿಯುವುದು ಮತ್ತು, 2ದಿನ ಮಳೆ ಬಂದು ನೀರು ನಿಂತು ಕುಣಿಯ ಗಾತ್ರ ಆಳ ತಿಳಿಯದ ಸರ್ಕಾರಿ ಬಸ್ಸು ಮಾಮೂಲಿಯಂತೆ ಹೋಗಿ ಕೆಸರು ತುಂಬಿದ್ದ ಕುಣಿಯಲ್ಲಿ ಹಿಂದಿನ ಚಕ್ರ ಸಿಕ್ಕಿಕೊಂಡಿದೆ. ಈ ಘಟನೆಯಿಂದ ಕೆಲಹೊತ್ತು ಕಂಡಕ್ಟರ್, ಡ್ರೈವರ್ ತಮ್ಮ ಬಸ್ಸನ್ನು ಕಡೆಗೆ ತೆಗೆದುಕೊಳ್ಳಲು ಒದ್ದಾಡುವಂತಾಯಿತು. ರೈತರ ಸಹಾಯ ಪಡೆದು ಟ್ರಾಕ್ಟರ್ ತರಿಸಿ, ಬಸ್ಸಿನಲ್ಲಿದ್ದ ಪ್ರಯಾಣಿಕರು ಸೇರಿ ಕೇಸರಿನಿಂದ ಹೊರಗೆ ಎಳೆದು ತರಲು ಹರಸಾಹಸಪಡುವಂತೆ ಆಗಿತ್ತು. ಈ ಜಾಗದಲ್ಲಿ ಸಿಸಿ ಸೇತುವೆ ನಿರ್ಮಾಣ ಮಾಡಬೇಕೆಂದು, ಪೈಪ್‍ಲೈನ್ ದುರಸ್ಥಿ ಮಾಡಬೇಕೆಂದು, ಹಲವು ಬಾರಿ ಸಂಬಂಧಿಸಿದವರಿಗೆ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲವೆಂದು ಹಾಗಲೂರು ಗ್ರಾಮದ ಕೆಲವರು ಅಸಮಧಾನ ವ್ಯಕ್ತಪಡಿಸಿದರು. ಕೂಡಲೇ ಸುಗಮ ಸಂಚಾರಕ್ಕೆ ಗ್ರಾಮ ಪಂಚಾಯಿತಿ ಆಡಳಿತದಿಂದ ಗಟ್ಟಿ ಮೊರಂ ಹಾಕಿಸುವ ಅಥವಾ ತಾತ್ಕಾಲಿಕವಾಗಿ ಸಿಸಿ ಕಾಂಕೀಟ್ ಹಾಕಿಸಿ ನಾಲು ಸಮಸ್ಯೆ ಪರಿಹರಿಸಬೇಕೆಂಬುದು, ಗ್ರಾಮಸ್ಥರ ವಾಹನ ಸವಾರರ ಆಗ್ರಹವಾಗಿದೆ.