ಸರ್ಕಾರಿ ಪ್ರೌಢ ಶಾಲೆಯಲ್ಲಿ ಸಸ್ಯ ಶಾಮಲ ಮತ್ತು ವನ್ಯಜೀವಿಗಳ ಸಂರಕ್ಷಣಾ ಸಪ್ತಾಹ

ಅಥಣಿ : ಅ.8:ವನ್ಯಜೀವಿಗಳು ನಮ್ಮ ಪರಿಸರದ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿವೆ. ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ವನ್ಯಜೀವಿಗಳು ಸಹಾಯ ಮಾಡುತ್ತವೆ. ಗಿಡಮರಗಳನ್ನು ಬೆಳೆಸುವುದರ ಜೊತೆಗೆ ವನ್ಯಜೀವಿಗಳ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಪ್ರಶಾಂತ ಗಾಣಿಗೇರಿ ಹೇಳಿದರು.
ಅವರು ಅಥಣಿ ತಾಲೂಕಿನ ನಾಗನೂರ ಪಿ ಕೆ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಪ್ರಾದೇಶಿಕ ವಲಯ ಅರಣ್ಯ ಇಲಾಖೆಯಿಂದ ಆಯೋಸಲಾಗಿದ್ದ ಸಸ್ಯ ಶಾಮಲ ಹಾಗೂ ವನ್ಯಜೀವಿಗಳ ಸಂರಕ್ಷಣಾ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಾನವನ ದುರಾಸೆಗೆ ಅರಣ್ಯನಾಶ ಮತ್ತು ವನ್ಯಜೀವಿಗಳ ಆವಾಸಸ್ಥಾನದ ನಾಶಕ್ಕೆ ಕಾರಣವಾಗಿವೆ. ಅಭಿವೃದ್ಧಿ ಮತ್ತು ನಗರೀಕರಣಕ್ಕಾಗಿ, ಮನುಷ್ಯನು ಅಣೆಕಟ್ಟುಗಳು, ಹೆದ್ದಾರಿಗಳು ಮತ್ತು ಪಟ್ಟಣಗಳನ್ನು ನಿರ್ಮಿಸಲು ಮರಗಳನ್ನು ಕಡಿದು ಹಾಕಿದ್ದಾನೆ. ಇದರಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಸಕಾಲಕ್ಕೆ ಮಳೆಗಾಲ ಆಗುತ್ತಿಲ್ಲ. ಇದರಿಂದ ಬರಗಾಲದ ಪರಿಸ್ಥಿತಿ ಎದುರಿಸುವಂತಾಗಿದೆ. ಕಾಡು ನಾಶವಾದಂತೆ ವನ್ಯಜೀವಿಗಳ ಸಂತತಿ ಕೂಡ ನಶಿಸುತ್ತಿದೆ. ಇದೆ ಸ್ಥಿತಿ ಮುಂದುವರೆದರೆ ಮಾನವ ಮತ್ತು ಪ್ರತಿಯೊಂದು ಪ್ರಾಣಿಯ ಉಸಿರಾಟಕ್ಕೆ ಬೇಕಾದ ಆಮ್ಲಜನಕದ ಕೊರತೆಯನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಹೆಚ್ಚು ಹೆಚ್ಚು ಗಿಡಗಳನ್ನು ಬೆಳೆಸಬೇಕು.ವನ್ಯಜೀವಿಗಳ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.
ಪರಿಸರ ಮತ್ತು ವನ್ಯಜೀವಿಗಳ ಮಹತ್ವ ಜನರಿಗೆ ತಿಳಿಸುವ ಉದ್ದೇಶದಿಂದ ಅಕ್ಟೋಬರ್ 2ರಿಂದ 8ರವರೆಗೆ ವನ್ಯಜೀವಿ ಸಂರಕ್ಷಣಾ ಸಪ್ತಾಹ ಆಚರಿಸಲಾಗುತ್ತದೆ. ಅಥಣಿ ತಾಲೂಕಿನ ಪ್ರತಿಯೊಂದು ಶಾಲೆಯ ಆವರಣದಲ್ಲಿ ಸಸ್ಯ ಶಾಮಲ ಕಾರ್ಯಕ್ರಮದ ಮೂಲಕ ಗಿಡಗಳನ್ನು ನೆಡಲಾಗುತ್ತಿದೆ. ಅಲ್ಲದೆ ಮಕ್ಕಳಿಗೂ ಸಸಿಗಳನ್ನು ವಿತರಿಸುವ ಮೂಲಕ ಅವರ ತೋಟ ಮತ್ತು ಮನೆಗಳ ಮುಂದೆ ಗಿಡಮರಗಳನ್ನು ಬೆಳೆಸಲು ಸಲಹೆ ನೀಡಲಾಗುತ್ತಿದೆ, ಎಂದರು
ಪಶು ವೈದ್ಯಾಧಿಕಾರಿ ಡಾ. ವೈ ಡಿ ನಾಗನೂರ ಮಾತನಾಡಿ ಹುಚ್ಚುನಾಯಿ ಕಡಿತದಿಂದ ಬರುವ ರೇಬಿಸ್ ವೈರಸ್ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮ ವಹಿಸುವ ಸಲಹೆ ನೀಡಿ ಸಾಕು ಪ್ರಾಣಿಗಳಿಗೆ ಚುಚ್ಚುಮದ್ದು ನೀಡುವ ಅಭಿಯಾನ ಆರಂಭವಾಗಿದ್ದು, ಗ್ರಾಮದ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಕಾಶಿನಾಥ ಎಸ್ ಸವದಿ ಮಾತನಾಡಿ ಪರಿಸರ ಮತ್ತು ವನ್ಯಜೀವಿಗಳ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಅರಣ್ಯ ಇಲಾಖೆಯಿಂದ ನಮ್ಮ ಶಾಲೆಯ ಆವರಣದಲ್ಲಿ ಸಸ್ಯ ಶಾಮಲಾ ಕಾರ್ಯಕ್ರಮದ ಮೂಲಕ ಅನೇಕ ಗಿಡಗಳನ್ನು ನೆಡಲಾಗಿದ್ದು, ನಮ್ಮ ಶಾಲೆಯ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ನಡೆಸಿ ನಗದು ಬಹುಮಾನ ನೀಡಿದ್ದಲ್ಲದೇ ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ವನ್ಯಜೀವಿಗಳ ವೀಕ್ಷಣೆಗೆ ಚಿಣ್ಣರ ಪ್ರವಾಸ ಮಾಡಿಸುತ್ತಿರುವುದು ಮಕ್ಕಳಿಗೆ ಸಂತಸ ತಂದಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಮತ್ತು ಭಾಷಣ ಸ್ಪರ್ಧೆಯನ್ನು, ರಂಗೋಲಿ ಸ್ಪರ್ಧೆ ಮತ್ತು ಚಿತ್ರಕಲೆ ಸ್ಪರ್ಧೆಯ ವಿಜೇತರಿಗೆ ಅಥಣಿ ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿಗಳಿಂದ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ನೀಡಿ ಪೆÇ್ರೀತ್ಸಾಹಿಸಲಾಯಿತು.
ಈ ವೇಳೆ ಅರಣ್ಯ ಇಲಾಖೆಯ ಉಪ ಅಧಿಕಾರಿ ಶಿವಾಜಿ ಮುಂಜೆ, ಗಸ್ತು ಅರಣ್ಯಪಾಲಕ ಮಲ್ಲಿಕಾರ್ಜುನ ಬಡಿಗೇರ, ಶಿಕ್ಷಣ ಇಲಾಖೆಯ ಸಮೂಹ ಸಂಪನ್ಮೂಲ ಅಧಿಕಾರಿ ಶಿವಾನಂದ ಮೇಲ್ಗಡೆ, ರಮೇಶ್ ಹೊಸಪೇಟೆ, ಎಸ್ ಎ ಬಾಗಿ, ಎಸ್ ಎಸ್ ಮೇತ್ರಿ, ಬಿ ಸಿ ಚೌಗುಲಾ, ಬಿ ಬಿ ಹಂಚನಾಳ, ಎಸ್ ಬಿ ಚೌಗುಲಾ, ಎಂ ಕೆ ನಡುವಿನಮನಿ, ಬಿ ಎಂ ಪಾಟೀಲ, ಐ ಜಿ ಸವದಿ, ಎಂ ಡಿ ಸವದಿ, ಬಿ ಬಿ ನಡುವಿನಮನಿ, ರಮೇಶ್ ಸನದಿ, ಎ ಎಚ್ ದೇಸಾಯಿ, ಎಸ್ ವಿ. ಹುಡೇದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಎಂ ಬಿ ವಟ್ಟನವರ ಸ್ವಾಗತಿಸಿದರು. ಶಿಕ್ಷಕ ಕೆ ಎಂ ನಾವಿ ಪ್ರಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ವಿ ಎಚ್ ತುಳಸಿಗೇರಿ ಕಾರ್ಯಕ್ರಮ ನಿರೂಪಿಸಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯ ಎಸ್ ಎಸ್ ಸೀಮಾಣಿ ವಂದಿಸಿದರು.