ಸರ್ಕಾರಿ ಪ್ರೌಢ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ವಿತರಣೆ

(ಸಂಜೆವಾಣಿ ವಾರ್ತೆ)
ಇಂಡಿ:ಸೆ.24: ವಿದ್ಯಾರ್ಥಿಗಳು ಪುಸ್ತಕಗಳನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು. ಅಂದಾಗ ಮಾತ್ರ ಶೈಕ್ಷಣಿಕ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಶಿಕ್ಷಣ ಸಂಯೋಜಕರು ಮತ್ತು ತಾಲೂಕಾ ಪಠ್ಯಪುಸ್ತಕ ನೋಡಲ್ ಅಧಿಕಾರಿ ಎಂ ಬಿ ಡೇಂಬ್ರೆ ಹೇಳಿದರು.
ಅವರು ಇಂದು ಸರ್ಕಾರಿ ಪ್ರೌಢಶಾಲೆ ಇಂಡಿಯಲ್ಲಿ 2021- 22 ನೇ ಸಾಲಿನ ಉಚಿತ ಪಠ್ಯಪುಸ್ತಕಗಳನ್ನು ಶಾಲಾ ಮಕ್ಕಳಿಗೆ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಪುಸ್ತಕಗಳ ಬಳಕೆ ಹಾಗೂ ರಕ್ಷಣೆ ಅತಿ ಮುಖ್ಯವಾಗಿದೆ. ಅವುಗಳು ಟಿಪ್ಪಣೆ ಮಾಡಿಕೊಳ್ಳಲು ಸೇರಿದಂತೆ ವಿವಿಧ ವಿಷಯಗಳನ್ನು ಪುನರ್ ಮನನ ಮಾಡುವಲ್ಲಿ ನೆರವು ನೀಡುತ್ತವೆ. ಈ ದಿಸೆಯಲ್ಲಿ ಮಕ್ಕಳಿಗೆ ಆರ್ಥಿಕ ತೊಂದರೆ ಆಗದಂತೆ ಶಿಕ್ಷಣ ಪಡೆಯುವಲ್ಲಿ ಸರ್ಕಾರ ಉಚಿತ ಪುಸ್ತಕಗಳನ್ನು ವಿತರಣೆ ಮಾಡುತ್ತಿರುವುದು ಅತ್ಯಂತ ಉತ್ತಮ ಬೆಳವಣಿಗೆಯಾಗಿದೆ. ಇದರ ಸರಿಯಾದ ಸದುಪಯೋಗ ಮಕ್ಕಳು ಪಡೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ ಪ್ರೌಢ ಶಾಲಾ ಮುಖ್ಯ ಶಿಕ್ಷಕರಾದ ಎಂ ಪಿ ಬಿರಾದಾರ ಮಾತನಾಡಿ,ದಾಖಲಾತಿ ಸೇರಿದಂತೆ ಹಾಜರಾತಿ ಅತಿ ಮುಖ್ಯವಾಗಿದೆ. ಇದಕ್ಕಾಗಿ ಶಿಕ್ಷಣ ಇಲಾಖೆಯು ಅನ್ನಭಾಗ್ಯ, ಕ್ಷೀರ ಭಾಗ್ಯ ಸೇರಿ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳ ಬಳಕೆಯೊಂದಿಗೆ ಗುಣಾತ್ಮಕ ಶಿಕ್ಷಣ ಪಡೆಯುವಲ್ಲಿ ಪ್ರಯತ್ನ ಮಾಡಬೇಕು ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ತಾಲೂಕ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಎಸ್ ವಾಯ್ ಬಿರಾದಾರ, ಬಿ ಆರ್ ಪಿ ಆಯ್ ಜಿ ಅಳೂರ ಭಾಗವಹಿಸಿದ್ದರು.ಶಾಲಾ ಸಿಬ್ಬಂದಿ ಮತ್ತು ಮಕ್ಕಳು ಉಪಸ್ಥಿತರಿದ್ದರು.