ಸರ್ಕಾರಿ ಪ್ರೌಢಶಾಲೆ, ಡಿಪ್ಲೊಮೋ ಕಾಲೇಜು ಸ್ಥಾಪನೆಗೆ ಸರ್ಕಾರಕ್ಕೆ ಪ್ರಸ್ತಾವನೆ

ಚಿತ್ರದುರ್ಗ.ನ.೨೦; ಮೊಳಕಾಲ್ಮೂರು ತಾಲ್ಲೂಕು ರಾಂಪುರ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಹಾಗೂ ಡಿಪ್ಲೊಮೋ ಕಾಲೇಜು ಸ್ಥಾಪನೆ ಕುರಿತು, ಸಂಬಂಧಪಟ್ಟ ಇಲಾಖೆಯಿಂದ ವರದಿ ಪಡೆದುಕೊಂಡು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ ಹೇಳಿದರು.ಮೊಳಕಾಲ್ಮುರು ತಾಲ್ಲೂಕಿನ ದೇವಸಮುದ್ರ ಹೋಬಳಿ ರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಕೊಂಡಾಪುರ ಗ್ರಾಮದಲ್ಲಿ  ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.
  ಗ್ರಾಮದ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡುವುದರ ಜೊತೆಗೆ, ಆದ್ಯತೆ ಮೇರೆಗೆ ಸಮಸ್ಯೆಗಳನ್ನು ಪರಿಗಣಿಸಿ, ಯಾವ ಹಂತದ ಅಧಿಕಾರಿ ಅದನ್ನು ಬಗೆಹರಿಸಬೇಕು ಎನ್ನುವುದನ್ನು ನಿರ್ಧರಿಸಿ ಅನುಪಾಲನಾ ಕ್ರಮ ಕೈಗೊಳ್ಳಲಾಗುವುದು. ಅರ್ಜಿ ಸಲ್ಲಿಸಿದ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಕ್ರಮವಹಿಸಲಾಗುವುದು ಎಂದರು.
  ದೇಶದ ಶೇ.99 ರಷ್ಟು ಜನರ ಸೇವೆ ಮಾಡಲು ಶೇ.1 ರಷ್ಟು ನೌಕರ ವರ್ಗ ಕೆಲಸ ಮಾಡುತ್ತಿದೆ. ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸ ಅಧಿಕಾರಿಗಳದ್ದಾಗಿದೆ. ಅಧಿಕಾರಿಗಳು ಸಾರ್ವಜನಿಕರು ಸಲ್ಲಿಸುವ ಅಹವಾಲುಗಳನ್ನು ತಮ್ಮ ಹಂತದಲ್ಲೇ ಪರಿಹರಿಸಬೇಕು. ಜನರನ್ನು ಅನಗತ್ಯವಾಗಿ ಕಚೇರಿಗಳಿಗೆ ಅಲೆದಾಡಿಸಬಾರದು ಎಂದು ಸೂಚನೆ ನೀಡಿದರು.
  ಸರ್ಕಾರ ಹಾಗೂ ಸಾರ್ವಜನಿಕರ ನಡುವಿನ ಸಂವಹನದ ಅಂತರವನ್ನು ಕಡಿಮೆ ಮಾಡಲು, ಜಿಲ್ಲಾ, ತಾಲೂಕು ಹಾಗೂ ಕೆಳಮಟ್ಟದ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿದ್ದಾರೆ. ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ಹಾಗೂ ತಿಳುವಳಿಕೆಯನ್ನು ನೀಡಲಾಗುವುದು. ಅಧಿಕಾರಿಗಳು ಸಮಸ್ಯೆಗಳಿಗೆ ಕಾನೂನು ಚೌಕಟ್ಟಿನಲ್ಲಿ ಪರಿಹಾರ ನೀಡಬೇಕೆ ಹೊರತು ಮತ್ತಷ್ಟು ಜಟಿಲಗೊಳಿಸಲಾಬಾರದು. ನೌಕರರು ಸಾರ್ವಜನಿಕರಿಂದ ಅನಗತ್ಯವಾಗಿ ಹಣ ವಸೂಲಿ ಮಾಡುವ ಪ್ರಕರಣ ಕಂಡು ಬಂದರೆ ಗಂಭೀರವಾಗಿ ಪರಿಗಣಿಸಿ, ಶಿಸ್ತು ಕ್ರಮಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಎಚ್ಚರಿಸಿದರು.ಇದೇ ಸಂದರ್ಭದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಗ್ರಾಮದ ಮೂರು ಮಂದಿ ವಿಕಲಚೇತನ ಫಲಾನುಭವಿಗಳಿಗೆ ವೀಲ್ ಚೇರ್ ಹಾಗೂ 6 ಮಂದಿ ವಿಕಲಚೇತನ ಫಲಾನುಭವಿಗಳಿಗೆ ಶ್ರವಣ ಸಾಧನ ವಿತರಿಸಲಾಯಿತು. ಕಂದಾಯ ಇಲಾಖೆ ವತಿಯಿಂದ ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರ ನೀಡಲಾಯಿತು.