ಸರ್ಕಾರಿ ಪ್ರೌಢಶಾಲೆಯಲ್ಲಿ ಕುವೆಂಪು ಜನ್ಮದಿನಾಚರಣೆ

ಕೋಲಾರ,ಡಿ,೩೦- ನಗರದ ನೂತನ ಸರ್ಕಾರಿ ಪ್ರೌಢಶಾಲೆಯಲ್ಲಿ ಕುವೆಂಪು ರವರ ಜನ್ಮದಿನಾಚರಣೆ ಪ್ರಯುಕ್ತ ವಿಶ್ವಮಾನವ ದಿನಾಚರಣೆಯನ್ನು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು.
ಕಾರ್ಯಕ್ರಮವನ್ನು ಕೋಲಾರ ತಾಲೂಕು ತಹಶೀಲ್ದಾರ್ ಹರ್ಷವರ್ಧನ ರವರು ಉದ್ಘಾಟಿಸಿ, ಮಕ್ಕಳು ರೂಡಿಸಿಕೊಳ್ಳಬೇಕಾದ ಅವಶ್ಯಕ ಜೀವನ ಕೌಶಲಗಳು ಗುರಿ ಸಾಧಿಸಲು ಬೇಕಾದ ಛಲ ಹಾಗೂ ದೃಢತೆಯನ್ನು ಬೆಳೆಸಿಕೊಳ್ಳಲು ತಿಳಿಸಿದರು.
ಮಕ್ಕಳಲ್ಲಿ ಶಿಸ್ತು ಹಾಗೂ ಸಮಯ ಪಾಲನೆಯ ಬಗ್ಗೆ ಮನವರಿಕೆ ಮಾಡಿಕೊಟ್ಟರು. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಈ ದೇಶದ ಭವಿಷ್ಯವಾಗಬೇಕು ಹಾಗೂ ಸಮಾಜಕ್ಕೆ ಒಳ್ಳೆಯ ಹೆಸರನ್ನು ತರಲು ಉತ್ತಮ ಗುರಿಗಳನ್ನು ಹೊಂದಿರಬೇಕೆಂದು ತಿಳಿಸಿ, ಮಕ್ಕಳು ದುಶ್ಚಟ ಗಳಿಂದ ದೂರವಿರುವಂತೆ ಕಿವಿಮಾತು ಹೇಳಿದರು.
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಕೃಷ್ಣಮೂರ್ತಿ ಮಾತನಾಡಿ, ಮಕ್ಕಳಲ್ಲಿ ಆಸಕ್ತಿ ಮೂಡಿಸಲು ಶಿಕ್ಷಕರು ತೆಗೆದುಕೊಳ್ಳ ಬೇಕಾದ ಕ್ರಮಗಳನ್ನು ತಿಳಿಸಿದರು. ಮಕ್ಕಳ ಜೊತೆ ಸಂವಾದ ಮಾಡಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಲು ಇಲಾಖೆಯಿಂದ ನೀಡಿರುವ ಸಂಪನ್ಮೂಲ ಪುಸ್ತಕಗಳನ್ನು ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.
ಕುವೆಂಪು ಅವರು ಸಮಾಜಕ್ಕೆ ನೀಡಿರುವ ಸರ್ವಜನಾಂಗದ ಶಾಂತಿಯ ತೋಟವೆಂಬ ಮಾತು ಸಮಾಜದಲ್ಲಿ ಸಮಾನತೆಯನ್ನು ಸಾರುವಂತಿದ್ದು, ಇದನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಂಸ್ಥೆಯ ಉಪಪ್ರಾಂಶುಪಾಲರಾದ ಉಮಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಕನ್ನಡಕ್ಕೆ ತಮ್ಮ ಸಾಹಿತ್ಯದ ಮೂಲಕ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ರಾಷ್ಟ್ರಕವಿಯ ಸ್ಮರಣೆ ಅಗತ್ಯವಾಗಿದೆ, ನಾವೆಲ್ಲಾ ಅವರು ಸಾಹಿತ್ಯದ ಮೂಲಕ ನೀಡಿರುವ ಸಂದೇಶವನ್ನು ಪಾಲಿಸೋಣ ಎಂದರು.
ಮಕ್ಕಳಿಗೆ ಕರೋನ ಬಗ್ಗೆ ಮುಂಜಾಗ್ರತೆ ವಹಿಸಲು ತಿಳಿಸಿ ಮಾಸ್ಕ್ ವಿತರಿಸಲಾಯಿತು. ಎಲ್ಲ ಮಕ್ಕಳಿಗೆ ಗುರುತಿನ ಕಾರ್ಡ್ ನೀಡಲಾಯಿತು. ಕಾರ್ಯಕ್ರಮವನ್ನು ಶಿಕ್ಷಕ ಸತೀಶ್ ಕುಮಾರ್ ನಿರೂಪಿಸಿದರು. ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯರೆಡ್ಡಿ ಸ್ವಾಗತಿಸಿದರು. ಚಿತ್ರಕಲಾ ಶಿಕ್ಷಕ ಕಾಳಿದಾಸ ವಂದಿಸಿದರು. ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ರಫಿ ಶಿಕ್ಷಕರುಗಳಾದ ವನಜಾಕ್ಷಿ, ವಾಣಿ ,ಕೋಮಲ, ಕವಿತಾ, ಮುರಳಿ ಮೋಹನ್, ಅಚ್ಚುತ್ ಕುಮಾರ್ ಹಾಜರಿದ್ದರು.