ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸ್ನೇಹ ಸಂಗಮ ಕಾರ್ಯಕ್ರಮ

ಚಿತ್ರದುರ್ಗ.ಜ.೧೨; : ಕರ್ನಾಟಕ ಗಣಿ ಮತ್ತು ಪರಿಸರ ಪುನರುತ್ಥಾನ ನಿಗಮದ ರೂ.20 ಕೋಟಿ ವೆಚ್ಚದಲ್ಲಿ ನಗರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.ನಗರದ ತರಾಸು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸ್ನೇಹ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಖಾಸಗಿ ಕಾಲೇಜುಗಳಲ್ಲಿ ಡೊನೋಷನ್ ಹಾವಳಿ ಜಾಸ್ತಿಯಾಗಿದೆ. ಗ್ರಾಮೀಣ ಹಾಗೂ ನಗರದ ಪ್ರದೇಶದ ಬಡ ಮಕ್ಕಳು ಡೊನೇಷನ್ ನೀಡಿ ಕಾಲೇಜು ಸೇರುವುದು ಕಷ್ಟ. ಈ ಹಿನ್ನಲೆಯಲ್ಲಿ ನಗರದಲ್ಲಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಅವಶ್ಯಕತೆ ಇತ್ತು. ಇದನ್ನು ಮನಗಂಡು ಕಾಲೇಜು ಸ್ಥಾಪನೆಗೆ ಸರ್ಕಾರಕ್ಕೆ ಮನವಿ ಮಾಡಲಾಯಿತು. ಸದ್ಯ ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಬೋಧನೆ ಆರಂಭಿಸಲಾಗಿದೆ. ಈ ಕೋರ್ಸ್‍ಗಳಿಗೆ ಅತ್ಯಂತ ಬೇಡಿಕೆಯಿದೆ. ಅರ್ಜಿ ಸಲ್ಲಿಸಿದ ಎಲ್ಲಾ ಮಕ್ಕಳಿಗೆ ಪ್ರವೇಶ ನೀಡಲಾಗಿದೆ. ಇಂದು ರಾಜ್ಯದಲ್ಲೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣುಮಕ್ಕಳು ಓದುತ್ತಿರುವ ಪ್ರಥಮ ದರ್ಜೆ ಮಹಿಳಾ ಕಾಲೇಜು ಎಂಬ ಹೆಗ್ಗಳಿಕೆಗೆ ಚಿತ್ರದುರ್ಗ ಮಹಿಳಾ ಪ್ರಥಮ ದರ್ಜೆ ಕಾಲೇಜು ಪಾತ್ರವಾಗಿದೆ. ತಾತ್ಕಾಲಿಕವಾಗಿ ಸರ್ಕಾರಿ ಕಲಾ ಕಾಲೇಜು ಹಾಗೂ ವಿಜ್ಞಾನ ಕಾಲೇಜುಗಳ ಕೊಠಡಿಯಲ್ಲಿ ಬೋಧನೆ ನೀಡಲಾಗುತ್ತಿದೆ. ಕಾಲೇಜು ಸ್ಥಾಪನಗೆ ಅವಶ್ಯಕತೆ ಇರುವ 2.24 ಎಕರೆ ಜಮೀನನ್ನು ಸಂಬದಪಟ್ಟ ಇಲಾಖೆಯಿಂದ ಪಡೆದು ಕಾಲೇಜು ಶಿಕ್ಷಣ ಇಲಾಖೆ ಹಸ್ತಾಂತರ ಮಾಡಲಾಗಿದೆ. ಕೆ.ಎಂ.ಇ.ಆರ್.ಸಿ ಅನುದಾನ ಬಳಕೆ ಕುರಿತು ಸುಪ್ರಿಂ ಕೋರ್ಟ್ ನಿಯಮಗಳನ್ನು ಅನುಸರಿಸಿ, ಕಾಲೇಜು ಸ್ಥಾಪನೆಗೆ ರೂ.25 ಕೋಟಿ ಅನುದಾನ ನೀಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಅಂತಿಮವಾಗಿ ರೂ.20 ಕೋಟಿ ಮಂಜೂರಾಗಿದೆ. ವಿಸ್ತೃತ ಯೋಜನೆ ತಯಾರಿಸಿ ಶೀಘ್ರದಲ್ಲೇ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. ಮುಂದಿನ ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಂಡು ಇಂದು ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅಂತಿಮ ಹಂತದಲ್ಲಿ ನೂತನ ಕಾಲೇಜಿನಲ್ಲಿ ಅಭ್ಯಸಿಸಬಹುದು ಎಂದು ಆಶಾವಾದ ವ್ಯಕ್ತಪಡಿಸಿದರು.