ಸರ್ಕಾರಿ ಪಾಲಿಟೆಕ್ನಿಕ್ ಜಿಲ್ಲೆಯ ಪ್ರಪ್ರಥಮ ತಾಂತ್ರಿಕ ಶಿಕ್ಷಣ ಸಂಸ್ಥೆ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಫೆ.13: ಮಂಡ್ಯ ಜಿಲ್ಲೆಯ ಪ್ರಪ್ರಥಮ ತಾಂತ್ರಿಕ ಶಿಕ್ಷಣ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಪ್ರಾರಂಭವಾಗಲು ಅಂದಿನ ಕ್ಷೇತ್ರದ ಶಾಸಕರಾಗಿದ್ದ ದಿ.ಎಂ.ಕೆ.ಬೊಮ್ಮೇಗೌ ಡರು. ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಅವರ ಹೆಸರನ್ನಿಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಅವರು ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿನ ಎಂ.ಕೆ.ಬೊಮ್ಮೇಗೌಡರ ವೇದಿಕೆಯಲ್ಲಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಆಯೋಜಿಸಿದ್ದ ಸ್ನೇಹ ಸಮ್ಮಿಲನ-2024, ಹಳೆಯ ವಿದ್ಯಾರ್ಥಿಗಳ ಸಂಘದ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಪತ್ನಿ ಧನಲಕ್ಷ್ಮಿ ಜೊತೆ ಉದ್ಘಾಟಿಸಿ ಮಾತನಾಡಿದರು.
ಸ್ನೇಹ ಸಮ್ಮಿಲನದ ಹೆಸರಿನಲ್ಲಿ ಈ ಸಂಸ್ಥೆಯ ಎಲ್ಲಾ ಹಳೆಯ ವಿದ್ಯಾರ್ಥಿಗಳೂ ಒಗ್ಗೂಡಿ ಕಾಲೇಜಿನ ಅಭಿವೃದ್ದಿಗೆ ಮುಂದೆ ಬಂದಿರುವುದು ಸ್ವಾಗತಾರ್ಹ ಎಂದರು. ನಾನು ಇದೇ ಕಾಲೇಜಿನ ಹಳೆಯ ವಿದ್ಯಾರ್ಥಿ. 1979 ರಲ್ಲಿ ನಾನು ಪ್ರಥಮ ವರ್ಷದ ವಿದ್ಯಾರ್ಥಿಯಾಗಿ ಸೇರಿ ಡಿಪ್ಲಮೂ ಶಿಕ್ಷಣ ಪೂರೈಸಿದೆ. ಇಲ್ಲಿ ಕಲಿತ ಶೇ 99 ರಷ್ಟು ಜನ ದೇಶ, ವಿದೇಶಗಳಲ್ಲಿ ಎಂಜಿನಿಯರುಗಳಾಗಿ ಸೇವೆ ಸಲ್ಲಿಸಿದ್ದಾರೆ. ನಾನೊಬ್ಬ ಮಾತ್ರ ಕ್ಷೇತ್ರ ಬದಲಿಸಿ ಗುತ್ತಿಗೆದಾರನಾಗಿ ಅನಂತರ ರಾಜಕಾರಣಿಯಾಗಿದ್ದೇನೆ. ನಾನು ರಾಜ್ಯದ ಒಬ್ಬ ಸಚಿವನಾಗಿ ಈ ಕಾರ್ಯಕ್ರಮಕ್ಕೆ ಬಂದಿಲ್ಲ. ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿ ಭಾಗವಹಿಸಿದ್ದೇನೆ. ನನ್ನೆಲ್ಲಾ ಹಳೆಯ ಸ್ನೇಹಿತರನ್ನು ಮತ್ತು ಈ ಸಂಸ್ಥೆಯಲ್ಲಿ ಕಲಿತ ಇತರ ಹಿರಿಯ ಹಾಗೂ ಕಿರಿಯ ಮಿತ್ರರನ್ನು ನೋಡಿ ನನಗೆ ಅತೀವ ಸಂತೋಷವಾಗುತ್ತಿದೆ. ನಾನು ಈ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ಕೆ.ಆರ್.ಪೇಟೆ ಒಂದು ಪುಟ್ಟಹಳ್ಳಿಯಂತಿತ್ತು. ಸಂಜೆಯಾದರೆ ಸಾಕು ರಸ್ತೆಗಳಲ್ಲಿ ಜನ ಸಂಚಾರ ಇರುತ್ತಿರಲಿಲ್ಲ. ಇಂದು ಕೆ.ಆರ್.ಪೆಟೆ ಜಿಲ್ಲಾ ಕೇಂದ್ರವಾಗುವ ಹಂತಕ್ಕೆ ಬೆಳೆದು ನಿಂತಿದೆ. ಹಳೆಯ ವಿದ್ಯಾರ್ಥಿಗಳು ತಮ್ಮ ನಿವೃತ್ತಿಯ ಅನಂತರ ಹಳೆಯ ವಿದ್ಯಾರ್ಥಿಗಳ ಸಂಘ ರಚಿಸುವ ಬದಲು ತಾವು ಉದ್ಯೋಗದಲ್ಲಿದ್ದಾಗಲೇ ಮಾಡಿದ್ದರೆ ಈ ಕಾಲೇಜಿಗೆ ಹೆಚ್ಚಿನ ಅನುಕೂಲ ಮಾಡಬಹುದಿತ್ತು. ತಡವಾಗಿಯಾದರೂ ಸಂಘಟಿತರಾಗಿ ಕಾಲೇಜಿನ ಅಭಿವೃದ್ದಿಗೆ ಯೋಜನೆಗಳನ್ನು ರೂಪಿಸಿ ಹೊಸ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ನಿಂತಿರುವುದು ಸ್ವಾಗತಾರ್ಹ ಎಂದ ಸಚಿವ ಎನ್.ಚಲುವರಾಯಸ್ವಾಮಿ ಕಾಲೇಜಿನ ಅಭಿವೃದ್ದಿಗೆ ಅಗತ್ಯವಾದ ಎಲ್ಲಾ ಸೌಲಭ್ಯಗಳನ್ನು ಸರ್ಕಾರದ ವತಿಯಿಂದ ಮಾಡಿಸಿಕೊಡುವ ಜವಾಬ್ದಾರಿ ನನ್ನದು. ಕಾಲೇಜಿನ ಸಮಸ್ಯೆಗಳ ಪಟ್ಟಿ ಮಾಡಿಕೊಟ್ಟರೆ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತೇನೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಹೆಚ್.ಟಿ.ಮಂಜು ಮಾತನಾಡಿ ವಿದ್ಯಾರ್ಥಿಗಳು ಸಾಧನೆ ಮಾಡಿದರೆ ಅದರ ಯಶಸ್ಸು ಅವರು ಕಲಿತ ಶಾಲೆ ಮತ್ತು ಕಲಿಸಿದ ಗುರುಗಳಿಗೆ ಸಲ್ಲುತ್ತದೆಂದರು. 1958 ರಲ್ಲಿ ಆರಂಭವಾದ ಇಲ್ಲಿನ ಪಾಲಿಟೆಕ್ನಿಕ್ ಮಂಡ್ಯ ಜಿಲ್ಲೆಯ ಮೊಟ್ಟ ಮೊದಲ ತಾಂತ್ರಿಕ ಶಿಕ್ಷಣ ಸಂಸ್ಥೆ. ಒಂದು ಹೈಸ್ಕೂಲ್ ತರುವುದೇ ಕಷ್ಠಕರವಾಗಿದ್ದ ಕಾಲಘಟ್ಟದಲ್ಲಿ ಅಂದಿನ ಶಾಸಕರಾಗಿದ್ದ ದಿ.ಎಂ.ಕೆ.ಬೊಮ್ಮೇಗೌಡರು ಕೆ.ಆರ್.ಪೇಟೆಯಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಆರಂಭಿಸಿ ಗ್ರಾಮೀಣ ಪ್ರದೇಶದ ಸಾವಿರಾರು ಬಡವರ ಮಕ್ಕಳು ಎಂಜಿನಿಯರುಗಳಾಗಲು, ಉದ್ಯಮಿಗಳಾಗಿ ರೂಪುಗೊಳ್ಳಲು ಕಾರಣಕರ್ತರಾಗಿದ್ದಾರೆಂದರು. ಇದೇ ಕಾಲೇಜಿನ ವಿದ್ಯಾರ್ಥಿ ಎನ್.ಚಲುವರಾಯಸ್ವಾಮಿ ರಾಜ್ಯದ ಪ್ರಭಾವಿ ಸಚಿವರಾಗಿದ್ದಾರೆ.
ಈ ಪಾಲಿಟೆಕ್ನಿಕ್ ನಮ್ಮೆಲ್ಲರ ಹೆಮ್ಮೆ. ಹಿಂದೆ ಪಾಲಿಟೆಕ್ನಿಕ್ ಕಲಿತರೇ ಉದ್ಯೋಗ ಗ್ಯಾರಂಟಿ ಎನ್ನುವ ಕಾಲವಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಇಲ್ಲಿನ ಪಾಲಿಟೆಕ್ನಿಕ್ ಸಂಸ್ಥೆಗೆ ಪೂರಕವಾಗಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಕೂಡ ಇದೇ ಆವರಣದಲ್ಲಿ ನಡೆಯುತ್ತಿದೆ. ಈ ಎರಡೂ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ನಮ್ಮ ತಾಲೂಕಿಗೆ ಕಿರೀಟ ಪ್ರಾಯವಾಗಿವೆ ಎಂದ ಶಾಸಕರು ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಒಗ್ಗೂಡಿ ಕಾಲೇಜಿನ ಅಭಿವೃದ್ದಿಗೆ ತಮ್ಮದೇ ಆದ ಯೋಜನೆಗಳನ್ನು ರೂಪಿಸಿಕೊಂಡಿದ್ದಾರೆ. ರಾಜ್ಯದ ಎಲ್ಲಾ ಶಾಲಾ?ಕಾಲೇಜುಗಳಲ್ಲೂ ಹಳೆಯ ವಿದ್ಯಾರ್ಥಿಗಳು ಒಗ್ಗೂಡಿ ತಾವು ಕಲಿತ ಶಾಲೆಗಳ ಅಭಿವೃದ್ದಿಗೆ ಕೈಜೋಡಿಸುವಂತೆ ಮನವಿ ಮಾಡಿದರು.ಇದೇ ಸಂದರ್ಬದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ದಂಪತಿಗಳು, ಶಾಸಕ ಹೆಚ್.ಟಿ.ಮಂಜು ಸೇರಿದಂತೆ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿಗಳು ಮತ್ತು ಸಾಧಕರನ್ನು ಗೌರವಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ನಾಡಿನ ಖ್ಯಾತ ಕಲಾವಿದರಾದ ಕಂಬದ ರಂಗಯ್ಯ, ವ್ಯಾಸರಾಜ್ ಸೋಸಲೆ, ಶಮಿತಾ ಮಲ್ನಾಡ್, ಹರ್ಷ ರಂಜಿನಿ ಮೊದಲಾದವರಿಂದ ಸಂಗೀತ ಸಂಜೆ ನಡೆಸಲಾಯಿತು.ಕಾರ್ಯಕ್ರಮದಲ್ಲಿ ಶ್ರೀಮತಿ ಧನಲಕ್ಷ್ಮಿ ಚಲುವರಾಯಸ್ವಾಮಿ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಅಧ್ಯಕ್ಷ ಎಸ್.ಬಿ.ಸೋಮೇಶ್, ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ಪಾಲಿಟೆಕ್ನಿಕ್ ಪ್ರಾಂಶುಪಾಲ ಹೆಚ್.ಎಸ್.ನಾಗರಾಜು, ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಆರ್.ದಿನೇಶ್ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು