ಸರ್ಕಾರಿ ಪದವಿ, ಇಂಜಿನಿಯರಿಂಗ್ ಕಾಲೇಜುಗಳಿಗೆ ೩೦ ಸಾವಿರ ಕಂಪ್ಯೂಟರ್‌ಗಳ ವಿತರಣೆ: ಪ್ರದೀಪ್

photo from swamy


ಬೆಂಗಳೂರು. ಏ. ೮- ರಾಜ್ಯದ ಸರ್ಕಾರಿ ಪದವಿ, ಇಂಜಿನಿಯರಿಂಗ್ ಕಾಲೇಜುಗಳಿಗೆ ೩೦ ಸಾವಿರ ಕಂಪ್ಯೂಟರ್‌ಗಳನ್ನು ವಿತರಿಸಲಾಗುವುದು ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಹೇಳಿದರು.
ನಗರದ ಶೇಷಾದ್ರಿ ರಸ್ತೆಯಲ್ಲಿರುವ ಕಾಲೇಜು ಶಿಕ್ಷಣ ಇಲಾಖೆಯ ಕಚೇರಿ ಮುಂಭಾಗದಲ್ಲಿ ಕಾಂಗ್ನಿಜೆಂಟ್ ಸಂಸ್ಥೆ ನೀಡಿರುವ ಡಿಬಾಂಡೆಂಡ್ ಕಂಪ್ಯೂಟರ್‌ಗಳನ್ನು ವಿವಿಧ ಕಾಲೇಜುಗಳಿಗೆ ಸಾಗಿಸುವ ವಾಹನಕ್ಕೆ ಹಸಿರು ನಿಶಾನೆ ತೋರಿ ಮಾತನಾಡಿದ ಅವರು, ರಾಜ್ಯದ ಎಲ್ಲ ಸರ್ಕಾರಿ ಪದವಿ, ಇಂಜಿನಿಯರಿಂಗ್ ತಾಂತ್ರಿಕ ಕಾಲೇಜುಗಳಿಗೆ ಒಟ್ಟು ೩೦ ಸಾವಿರ ಕಂಪ್ಯೂಟರ್‌ಗಳು ಬೇಕು. ಈಗ ಕಾಂಗ್ನಿಜೆಂಟ್ ಕಂಪೆನಿ ೧೨೫೦೦ ಕಂಪ್ಯೂಟರ್‌ಗಳನ್ನು ನೀಡಿದೆ. ಇನ್ನು ೮ ಸಾವಿರ ಕಂಪ್ಯೂಟರ್ ನೀಡುವುದಾಗಿ ಹೇಳಿದೆ. ಉಳಿದ ೧೦ ಸಾವಿರ ಕಂಪ್ಯೂಟರ್‌ಗಳನ್ನು ವಿವಿಧ ಕಂಪೆನಿಗಳಿಂದ ಪಡೆಯುವ ಕೆಲಸ ಮಾಡಲಾಗುವುದು ಎಂದರು.
ಇಂದು ರವಾನಿಸಲ್ಪಟ್ಟ ಕಂಪ್ಯೂಟರ್‌ಗಳನ್ನು ಬೆಂಗಳೂರು ವಲಯದ ಕಾಲೇಜುಗಳಿಗೆ ವಿತರಿಸಲಾಗುವುದು ಎಂದು ಅವರು ಹೇಳಿದರು. ಈ ಕಂಪ್ಯೂಟರ್‌ಗಳಿಗೆ ಅಗತ್ಯವಾದ ಸಾಫ್ಟ್‌ವೇರ್‌ನ್ನು ರೋಟರಿ ಕ್ಲಬ್ ಅಪ್‌ಡೇಟ್ ಮಾಡಿಕೊಡಲಿದೆ ಎಂದು ಅವರು ತಿಳಿಸಿದರು. ಹೆಲ್ಪ್ ಎಜುಕೇಟ್ ಕಾರ್ಯಕ್ರಮದಡಿ ವಿದ್ಯಾರ್ಥಿಗಳಿಗೆ ನೆರವಾಗುವ ಹಾಗೂ ಅಧ್ಯಾಪಕರಿಗೆ ತರಬೇತಿ ನೀಡುವ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದೇವೆ ಎಂದರು. ಈ ಸಂದರ್ಭದಲ್ಲಿ ಕಾಂಗ್ನಿಜೆಂಟ್ ಸಂಸ್ಥೆಯ ಸೆಲ್ವಿ, ರೋಟರಿ ಕ್ಲಬ್ ಮುಖ್ಯಸ್ಥ ನಾಗೇಂದ್ರಪ್ರಸಾದ್ ಉಪಸ್ಥಿತರಿದ್ದರು.