ಸರ್ಕಾರಿ ನೌಕರಿ ಆಮಿಷ ವಂಚಕ ಸೆರೆ

ಚಿಕ್ಕಮಗಳೂರು :೧೩. ಸರಕಾರಿ ಕೆಲಸ ಕೊಡಿಸುವುದಾಗಿ ನಿರುದ್ಯೋಗಿಗಳಿಂದ ಲಕ್ಷಾಂತರ ರೂ. ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಚಿಕ್ಕಮಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಂಗಳೂರು ಮೂಲದ ಪ್ರಭಾಕರ್ ಬಂಧಿತ ಆರೋಪಿಯಾಗಿದ್ದು, ಈತ ಹಲವು ಜಿಲ್ಲೆಗಳ ಸುಮಾರು ೪೮ ಮಂದಿಗೆ ಕೆಲಸದ ಆಸೆ ಹುಟ್ಟಿಸಿ ಸುಮಾರು ೨ ಕೋಟಿಗೂ ಅಧಿಕ ಹಣ ಪಡೆದು ವಂಚಿಸಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಎಸ್ಸಿ ಗುರುವಾರ ಸುದ್ದಿಗೊಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಇಂಡಿಯನ್ ಪೋಸ್ಟ್, ಇಸ್ರೋ, ಮೆಸ್ಕಾಂ, ಪಿಯುಸಿ, ಎಸೆಸೆಲ್ಸಿ ಬೋರ್ಡ್ ನಲ್ಲಿ ಗ್ರೂಪ್ ಸಿ ಮತ್ತು ಗ್ರೂಪ್ ಡಿ ನೌಕರಿ ಕೊಡಿಸುವುದಾಗಿ ಹೇಳಿ ನಕಲಿ ಐಡಿ ಕಾರ್ಡ್ ಗಳನ್ನು ತೋರಿಸಿ ಸರಕಾರದ ಉನ್ನತ ಹುದ್ದೆಯಲ್ಲಿರುವುದಾಗಿ ಹೇಳಿ ಅಮಾಯಕರನ್ನು ನಂಬಿಸುತ್ತಿದ್ದ ಎಂದು ಹೇಳಿದ್ದಾರೆ.

ವಂಚಿಸಿದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ ಈತ ತಿರುಪತಿ ದೇವಾಲಯಕ್ಕೆ ಹೆಲಿಕಾಪ್ಟರ್ ನಲ್ಲಿ ಹೋಗಿ ಬರುತ್ತಿದ್ದು, ಕೋಟಿ ಬೆಲೆ ಬಾಳುವ ಹೊಸ ಮನೆ ಖರೀದಿಗೆ ೧೫ ಲಕ್ಷ ಮುಂಗಡ ಹಣ ನೀಡಿದ್ದ ಎಂದು ಎಸ್ಪಿ ಹೇಳಿದರು.

ಪ್ರಭಾಕರ್ ಇತ್ತೀಚೆಗೆ ಚಿಕ್ಕಮಗಳೂರಿಗೆ ಬಂದಿದ್ದ ವೇಳೆ ಹೊಟೇಲೊಂದರಲ್ಲಿ ಕೆಲಸ ಮಾಡುತ್ತಿದ್ದ ಉಮೇಶ್ ಎಂಬಾತನನ್ನು ಪರಿಚಯ ಮಾಡಿ ಕೊಂಡು ಪಿಯು ಬೋರ್ಡ್ ನಲ್ಲಿ ಕೆಲಸ ಕೊಡಿಸಿವುದಾಗಿ ನಂಬಿಸಿದ್ದ, ಉಮೇಶ್ ಎರಡು ಕಂತುಗಳಲ್ಲಿ ೩.೫ ಲಕ್ಷ ರೂ. ನೀಡಿದ್ದು, ನಂತರ ಉಮೇಶ್ ನನ್ನು ಬೆಂಗಳೂರಿಗೆ ಬರಲು ಹೇಳಿದ್ದು, ಬೆಂಗಳೂರಿಗೆ ಹೋದಾಗ ಪ್ರಭಾಕರ್ ವಂಚನೆ ಅರಿತು ಇಲ್ಲಿನ ನಗರ ಠಾಣೆಗೆ ದೂರು ನೀಡಿದ್ದರು.

ಉಮೇಶ್ ನೀಡಿದ ದೂರಿನ ಮೇರೆಗೆ ನಗರಠಾಣೆ ಪೊಲೀಸರು ಆರೋಪಿ ಪ್ರಭಾಕರ್ ನನ್ನು ವಶಕ್ಕೆ ಪಡೆದು ತನಿಖೆ ನಡೆಸುವ ವೇಳೆ ಈತ ರಾಜ್ಯಾದ್ಯಂತ ಅನೇಕ ಮಂದಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ರಾಜ್ಯಾದ್ಯಂತ ಯುವಕ-ಯುವತಿಯರಿಗೆ ವಂಚಿನೆ ಮಾಡಿದ್ದು ಕೃತ್ಯಕ್ಕೆ ಬಳಸಿದ ನಕಲಿ ಆಫರ್ ಲೆಟರ್ ನೀಡಿ ಒಬ್ಬೊಬ್ಬರಿಂದ ೧೦-೧೫ ಲಕ್ಷ ರೂ. ಪಡೆದುಕೊಳ್ಳುತ್ತಿದ್ದ. ಬಂಧಿತನಿಂದ ಕೃತ್ಯಕ್ಕೆ ಬಳಸಿದ್ದ ಕಂಪ್ಯೂಟರ್, ಕಾರು ಸೇರಿದಂತೆ ವಿವಿಧ ಇಲಾಖೆಗಳ ನಕಲಿ ಪೋಸ್ಟ್ ಕವರ್, ಲೇಟರ್ ಹೆಡ್, ನಕಲಿ ಗುರುತು ಚೀಟಿ ಹಾಗೂ ೬೦ ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಎಎಚ್ ಅಕ್ಷಯ್ ಮಚೀಂದ್ರ ತಿಳಿಸಿದರು