ಸರ್ಕಾರಿ ನೌಕರರ ಸಾಹಿತ್ಯ ಸಮ್ಮೇಳನ ಆಯೋಜನೆ

ಬೀದರ:ಡಿ.7: ಬರುವ ದಿನಗಳಲ್ಲಿ ರಾಜ್ಯ ಸರ್ಕಾರಿ ನೌಕರರ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಹೇಳಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ಇಲ್ಲಿಯ ಪ್ರತಾಪನಗರದ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಎರಡು ದಿನ ಕನ್ನಡ ನಾಡು, ನುಡಿ, ನೌಕರರ ಸಾಹಿತ್ಯ ಸೇರಿದಂತೆ ವಿವಿಧ ವಿಷಯಗಳ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗುವುದು. ಸಾಧಕ ಸರ್ಕಾರಿ ನೌಕರರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಕಳೆದ ಅವಧಿಯಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಕನ್ನಡ ಪರ ಚಟುವಟಿಕೆಗಳನ್ನು ನಡೆಸಿದ್ದೇನೆ. ನಾಡು, ನುಡಿ, ಸಾಹಿತ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ಉತ್ತೇಜನ ನೀಡಲಾಗಿದೆ. ಈಗಿನ ಅವಧಿಯಲ್ಲಿ ಇನ್ನಷ್ಟು ಉತ್ಸಾಹದಿಂದ ಕೆಲಸ ಮಾಡುವೆ. ನನ್ನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಕೃತಜ್ಞತೆ ಸಲ್ಲಿಸುವೆ ಎಂದು ಹೇಳಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಅವರು ಮಾತನಾಡಿ, ಸುರೇಶ ಚನಶೆಟ್ಟಿ ಸ್ನೇಹಜೀವಿಯಾಗಿದ್ದಾರೆ. ಉತ್ಸಾಹಿ ಯುವಕರಾಗಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಗುಣ ಅವರಲ್ಲಿದೆ. ಹೀಗಾಗಿ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಜಿಲ್ಲೆಯ ನೌಕರರ ಸಂಘ, ಸಂಸ್ಥೆಗಳು ಚುನಾವಣೆಯಲ್ಲಿ ಅವರಿಗೆ ಬೇಷರತ್ ಬೆಂಬಲ ನೀಡಿದ್ದವು ಎಂದು ತಿಳಿಸಿದರು.
ಚನಶೆಟ್ಟಿ ಮೊದಲ ಅವಧಿಯಲ್ಲಿ ಕನ್ನಡಿಗರ ಬಹುದಿನಗಳ ಕನಸಾಗಿದ್ದ ಕನ್ನಡ ಭವನಕ್ಕೆ ಜಿಲ್ಲಾ ಕೇಂದ್ರದಲ್ಲಿ ಒಂದು ಎಕರೆ ನಿವೇಶನ ಮಂಜೂರು ಮಾಡಿಸಿ, ಕಾಮಗಾರಿಯನ್ನೂ ಆರಂಭಿಸಿದ್ದಾರೆ. ಈಗಾಗಲೇ ಭವನದ ಒಂದು ಹಂತದ ಕಾಮಗಾರಿ ಮುಗಿದಿದೆ. ಈ ಅವಧಿಯಲ್ಲಿ ಭವನದ ಬಾಕಿ ಕಾಮಗಾರಿ ಪೂರ್ಣಗೊಳಿಸುವುದು, ಸಾಹಿತ್ಯ ಸಮ್ಮೇಳನ, ಗೋಷ್ಠಿ, ಪ್ರತಿಭಾ ಪರಿಚಯ ಕಾರ್ಯಕ್ರಮಗಳ ಮೂಲಕ ಜಿಲ್ಲೆಯಲ್ಲಿ ಕನ್ನಡ ಇನ್ನಷ್ಟು ಗಟ್ಟಿಗೊಳಿಸಲು ಶ್ರಮಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಘದ ಉಪಾಧ್ಯಕ್ಷೆ ಡಾ. ವೈಶಾಲಿ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರ ರೆಡ್ಡಿ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಸಾರಿಕಾ ಗಂಗಾ, ಗ್ರೇಡ್ 1 ದೈಹಿಕ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಂಜು ಸೂರ್ಯವಂಶಿ, ಗ್ರಾಮ ಲೆಕ್ಕಿಗರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಪಾಟೀಲ, ಭೂಮಾಪಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ, ಅಂಗವಿಕಲ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಕಪಲಾಪುರೆ ಮಾತನಾಡಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಸವರಾಜ ಜಕ್ಕಾ, ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ, ತಾಲ್ಲೂಕು ಘಟಕಗಳ ಅಧ್ಯಕ್ಷರಾದ ರಾಜಪ್ಪ ಪಾಟೀಲ, ನಾಗಶೆಟ್ಟಿ ಡುಮಣಿ, ರಾಜಕುಮಾರ ಬೇಲೂರೆ, ಶಿವಕುಮಾರ ಘಾಟೆ, ಲಿಂಗಾನಂದ ಮಹಾಜನ, ಮಲ್ಲಿಕಾರ್ಜುನ ಮೇತ್ರೆ, ಭೀಮಾಶಂಕರ ಆದೆಪ್ಪ ಇದ್ದರು.
ಸಂಘದ ಹಿರಿಯ ಉಪಾಧ್ಯಕ್ಷ ರಾಜಕುಮಾರ ಹೊಸದೊಡ್ಡೆ ಸ್ವಾಗತಿಸಿದರು. ಸಹ ಕಾರ್ಯದರ್ಶಿ ಮನೋಹರ ಕಾಶಿ ನಿರೂಪಿಸಿದರು.