ಸರ್ಕಾರಿ ನೌಕರರ ಸಾಧನೆ: ಗಂದಗೆ ಶ್ಲಾಘನೆ

ಬೀದರ:ನ.10: ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಜಿಲ್ಲೆಯ ಸರ್ಕಾರಿ ನೌಕರರು ಅತ್ಯುತ್ತಮ ಸಾಧನೆ ತೋರಿದ್ದಾರೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಶ್ಲಾಘಿಸಿದರು.
ಇಲ್ಲಿಯ ಒಳಾಂಗಣ ಕ್ರೀಡಾಂಗಣದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಈಚೆಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ನೌಕರರಲ್ಲಿಯೂ ಬಹಳಷ್ಟು ಪ್ರತಿಭಾವಂತ ಕ್ರೀಡಾಪಟುಗಳು ಇದ್ದಾರೆ. ನಾಲ್ಕೈದು ವರ್ಷಗಳಿಂದ ರಾಜ್ಯಮಟ್ಟದ ವಿವಿಧ ಕ್ರೀಡೆಗಳಲ್ಲಿ ಪ್ರತಿಭೆ ಪ್ರದರ್ಶಿಸಿ ಬೀದರ್ ಜಿಲ್ಲೆಯ ಕೀರ್ತಿ ಪತಾಕೆ ಹಾರಿಸುತ್ತಿದ್ದಾರೆ. ಈ ಬಾರಿಯ ರಾಜ್ಯಮಟ್ಟದ ಕ್ರೀಡಾಕೂಟದಲ್ಲೂ ಅನೇಕ ಸ್ಪರ್ಧೆಗಳಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಫುಟಬಾಲ್‍ನಲ್ಲಿ ಜಿಲ್ಲೆಯ ತಂಡ ಪ್ರಥಮ ಸ್ಥಾನ ಪಡೆದು ಸಾಧನೆ ಮೆರೆದಿದೆ. ಹಾಕಿಯಲ್ಲಿ ರನ್ನರ್ ಅಪ್ ಆಗಿದೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಗಣೇಶ ಎಂ. ಪ್ರಥಮ, ಹತ್ತು ಸಾವಿರ ಮೀಟರ್ ಓಟದಲ್ಲಿ ಅಭಿಷೇಕ ತೃತೀಯ, 61 ಕೆ.ಜಿ. ವಿಭಾಗದ ಫ್ರೀ ಸ್ಟೈಲ್ ಕುಸ್ತಿಯಲ್ಲಿ ಚಂದ್ರಕಾಂತ ತಳವಾಡೆ, ರೇಣುಕಾ ಅವರ ತಂಡ ದ್ವಿತೀಯ ಸ್ಥಾನ ಪಡೆದಿದೆ ಎಂದು ಹೇಳಿದರು.
ವಿವಿಧ ಸ್ಪರ್ಧೆಗಳ ವಿಜೇತರನ್ನು ಸನ್ಮಾನಿಸಿ ಪೆÇ್ರೀತ್ಸಾಹಿಸಲಾಯಿತು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಗೌತಮ ಅರಳಿ, ನೌಕರರ ಸಂಘದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಡಾ. ರಾಜಕುಮಾರ ಹೊಸದೊಡ್ಡೆ, ಸಹ ಕಾರ್ಯದರ್ಶಿ ಮನೋಹರ ಕಾಶಿ, ಪ್ರಚಾರ ಕಾರ್ಯದರ್ಶಿ ಸಂಜೀವಕುಮಾರ ಸೂರ್ಯವಂಶಿ ಇದ್ದರು.